ವಿರಾಜಪೇಟೆ ಜೂ.12 : ಅವೈಜ್ಞಾನಿಕವಾದ ಆಹಾರ ಪದ್ಧತಿ, ಒತ್ತಡದ ಕೆಲಸ ಕಾರ್ಯಗಳಿಂದ ಹೃದಯ ಸಂಬಂಧಿ ಕಾಯಿಲೆಗಳಿಗೆ ತುತ್ತಾಗಬಹುದು. ಯಾವುದೇ ಕಾಯಿಲೆಯನ್ನು ಅಸಡ್ಡೆ ಮಾಡದೆ ಚಿಕಿತ್ಸಾ ಕ್ರಮಗಳನ್ನು ಅನುಸರಿಸಬೇಕು ಎಂದು ಹಿಲ್ ಬ್ಲೂಮ್ಸ್ ಕ್ಲಿನಿಕ್‍ನ ವೈದ್ಯರಾದ ಡಾ. ಕಿರಣ್ ತಿಳಿಸಿದರು.
ನಗರದ ಶ್ರೀ ಮುತ್ತಪ್ಪನ್ ಓಣಂ ಆಚರಣಾ ಸಮಿತಿ ಮತ್ತು ಹಿಲ್ ಬ್ಲೂಮ್ಸ್ ಕ್ಲಿನಿಕ್ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ನಗರದ ಶ್ರೀ ಮುತ್ತಪ್ಪ ಕಲಾ ಮಂಟಪದಲ್ಲಿ ಆಯೋಜಿಸಲಾಗಿದ್ದ ಉಚಿತ ಹೃದಯ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಹೃದಯ ಸಂಬಂಧಿತ ಕಾಯಿಲೆಗಳನ್ನು ಮೊದಲೆ ಗುರುತಿಸುವುದು ಮುಖ್ಯ. ಯಾವುದೇ ಸಂದರ್ಭದಲ್ಲಿ ಉದಾಸೀನ ಮಾಡದೆ ಚಿಕಿತ್ಸೆಗೆ ಮುಂದಾಗಬೇಕು. ಕಾಲಹರಣ ಮಾಡಿದಲ್ಲಿ ಅನಾಹುತ ಸಂಭವಿಸುವುದು ಶತಃಸಿದ್ಧವೆಂದು ತಿಳಿಸಿ, ಸರ್ವರು ಆರೋಗ್ಯದತ್ತ ಗಮನಹರಿಸಿ ಎಂದು ಹೇಳಿದರು.
ಶ್ರೀ ಮುತ್ತಪ್ಪನ್ ಓಣಂ ಆಚರಣಾ ಸಮಿತಿಯ ಅಧ್ಯಕ್ಷ ಸುಮೇಶ್ ಪಿ.ಜಿ. ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಿತಿಯು ಕಲೆ ಮತ್ತು ಸಂಸ್ಕೃತಿಗೆ ಮಾತ್ರ ಸೀಮಿತವಾಗದೆ ಜನಪರ ಕಾಳಜಿಯಿಂದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿದೆ. ಈ ನಿಟ್ಟಿನಲ್ಲಿ ಪ್ರಥಮವಾಗಿ ಹೃದಯ ತಪಾಸಣೆ ಶಿಬಿರವನ್ನು ಆಯೋಜಿಸಲಾಗಿದೆ. ಸಾರ್ವಜನಿಕರು ಶಿಬಿರದಲ್ಲಿ ಭಾಗವಹಿಸಿ ಆರೋಗ್ಯವನ್ನು ಕಾಪಾಡಿಕೊಂಡು ಸುಖಿ ಜೀವನ ಸಾಗಿಸುವಂತಾಗಬೇಕು ಎಂದರು.
ವೇದಿಕೆಯಲ್ಲಿ ಹಿಲ್ ಬ್ಲೂಮ್ಸ್ ಕ್ಲಿನಿಕ್ ಸಂಸ್ಥೆಯ ಡಾ. ದಕ್ಷಿತಾ, ಚೈತನ್ಯ ಮಠಪುರ ಶ್ರೀ ಮುತ್ತಪ್ಪನ್ ದೇವಾಲಯದ ಅಧ್ಯಕ್ಷರಾದ ಟಿ.ಕೆ. ರಾಜನ್ (ಪುಷ್ಪ), ಉದ್ಯಮಿ ಸುರೇಶ್, ಶ್ರೀ ಮುತ್ತಪ್ಪನ್ ಓಣಂ ಆಚರಣಾ ಸಮಿತಿಯ ಗೌರವ ಅಧ್ಯಕ್ಷ ಟಿ.ಕೆ.ಪದ್ಮನಾಭ, ಕಾರ್ಯದರ್ಶಿ ಸಿ.ಆರ್.ಬಾಬು, ಕೋಶಾಧಿಕಾರಿ ಟಿ.ಆರ್.ಗಣೇಶ್, ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಗಳಾದ ರಜನಿ ಉಪಸ್ಥಿತರಿದ್ದರು. ಸುಮಾರು 200 ಮಂದಿ ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು.
ವರದಿ : ಕಿಶೋರ್ ಕುಮಾರ್ ಶೆಟ್ಟಿ