ಸುಂಟಿಕೊಪ್ಪ,ಜೂ.12: ಕೊಡಗಿಗೆ ಮುಂಗಾರು ಪ್ರವೇಶಿಸಿದ್ದು, ಭಾರೀ ಗಾಳಿ ಮಳೆಯಾಗುವ ಮೂನ್ಸೂಚನೆ ಹವಾಮಾನ ಇಲಾಖೆ ವರದಿ ನೀಡಿದ್ದು, ರಾಷ್ಟ್ರೀಯ ಹೆದ್ದಾರಿ ಬಳಿ ಬೃಹದಾಕಾರದ ಒಣಗಿದ ಮರಗಳು ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಚೆಸ್ಕಾಂ ಹಾಗೂ ಅರಣ್ಯ ಇಲಾಖೆ ಕಾರ್ಯಚರಣೆ ನಡೆಸಿ ತೆರವುಗೊಳಿಸುವಂತೆ ಜಿ.ಪಂ ಮಾಜಿ ಸದಸ್ಯ ಪಿ.ಎಂ.ಲತೀಫ್ ಹಾಗೂ ವಾಹನ ಚಾಲಕರು ಆಗ್ರಹಿಸಿದ್ದಾರೆ.
ಸುಂಟಿಕೊಪ್ಪದಿಂದ ಮಡಿಕೇರಿಗೆ ತೆರಳುವ ರಾಷ್ಟ್ರೀಯ ಹೆದ್ದಾರಿ 275ರ ರಸ್ತೆ ಬದಿ ಒಣಗಿದ ಬೃಹದಾಕಾರದ ಮರಗಳು ವಾಹನ ಸವಾರರು ಹಾಗೂ ಪದಾಚಾರಿಗಳಿಗೆ ಸಂಚಕಾರ ಉಂಟು ಮಾಡುವ ಮೊದಲು ಮರಗಳನ್ನು ತೆರವುಗೊಳಿಸುವಂತೆ ಒತ್ತಾಯಿಸಿದರು.
ಬೋಯಿಕೇರಿ, ಸಿಂಕೋನ, ಬಾಳೆಕಾಡು, ಕೆದಕಲ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಳೆಗಾಲದಲ್ಲಿ ವಾಹನಗಳ ಮೇಲೆ ಮರ ಬಿದ್ದು ಸಾವು ನೋವು ಸಂಭವಿಸಿದ ಪ್ರಕರಣಗಳು ನಡೆದಿವೆ. ಇಂಥಹ ಘಟನೆಗಳು ಮತ್ತೆ ಮರುಕಳಿಸದಂತೆ ರಸ್ತೆ ಬದಿಗೆ ಬಾಗಿ ನಿಂತ ಮರಗಳನ್ನು ಮುಂಗಾರಿನ ವೇಳೆ ಕಡಿದು ತೆರವುಗೊಳಿಸುವಂತೆ ಪಿ.ಎಂ.ಲತೀಫ್ ಮನವಿ ಮಾಡಿದರು.