ಕುಶಾಲನಗರ ಜೂ.12 : ಮಕ್ಕಳಿಗೆ ಅತ್ಯಗತ್ಯವಾದ ಗುಣಮಟ್ಟದ ಶಿಕ್ಷಣ ನೀಡುವುದು ಪೋಷಕರ ಕರ್ತವ್ಯ ಎಂದು ಅಲ್ ಬಿರ್ರ್ ಫ್ಯೂಚರ್ ಮಾಡೆಲ್ ಸ್ಕೂಲ್ ಮುಖ್ಯಸ್ಥ ಸಯ್ಯದ್ ಮುಹಮ್ಮದ್ ಕೋಯಾ ಜಮಲುಲ್ಲಯ್ಲಿ ತಂಜ್ಞಳ್ ಹೇಳಿದರು.
ಕುಶಾಲನಗರದಲ್ಲಿ ನೂತನವಾಗಿ ಪ್ರಾರಂಭವಾಗುತ್ತಿರುವ ಅಲ್ ಬಿರ್ರ್ ಫ್ಯೂಚರ್ ಮಾಡೆಲ್ ಸ್ಕೂಲನ್ನು ಉದ್ಘಾಟಿಸಿ ಮಾತನಾಡಿದ ಅವರು, ಒಟ್ಟು 400ಕ್ಕೂ ಹೆಚ್ಚು ಅಲ್ ಬಿರ್ರ್ ಫ್ಯೂಚರ್ ಮಾಡೆಲ್ ಸ್ಕೂಲ್ ನಲ್ಲಿ 16 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ನಡೆಸುತ್ತಿದ್ದಾರೆ. ಪ್ರತಿಯೊಬ್ಬರಿಗೂ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯುನೈಟೆಡ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಸಿ.ಎಂ.ಹಮೀದ್, ವಿದ್ಯೆಗೆ ಎಂದಿಗೂ ಬೆಲೆ ಕಟ್ಟಲಾಗುವುದಿಲ್ಲ. ವಿದ್ಯೆ ಬಲ್ಲವ ಎಲ್ಲವನ್ನೂ ಸಾಧಿಸಬಲ್ಲ. ಮಕ್ಕಳಿಗೆ ಉತ್ತಮವಾದ ಶಿಕ್ಷಣವನ್ನು ನೀಡಬೇಕು. ಈ ಉದ್ದೇಶದಿಂದ ಜಿಲ್ಲೆಯಲ್ಲಿಯೇ ಪ್ರಥಮವಾಗಿ ಕುಶಾಲನಗರದಲ್ಲಿ ಅಲ್ ಬಿರ್ರ್ ಫ್ಯೂಚರ್ ಮಾಡೆಲ್ ಸ್ಕೂಲನ್ನು ತೆರೆಯಾಗಿದೆ ಎಂದರು.
ಕೆ.ಪಿ.ಸಿ.ಸಿ ಸದಸ್ಯ ಮಂಜುನಾಥ್ ಗುಂಡೂರಾವ್ ಮಾತನಾಡಿ, ಅಲ್ಪಸಂಖ್ಯಾತರಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುಲು ಹಿಂದೇಟು ಹಾಕುತ್ತಾರೆ. ಸಂವಿಧಾನವು ಶಿಕ್ಷಣದ ಹಕ್ಕನ್ನು ನೀಡಿದೆ. ಆದ್ದರಿಂದ ಎಲ್ಲರೂ ಶಿಕ್ಷಣವನ್ನು ಪಡೆಯಬೇಕು ಎಂದರು.
ಈ ಸಂದರ್ಭ ಫಾಳಿಲಾ ವೊಮೆನ್ಸ್ ಕಾಲೇಜ್ ಪ್ರಾಂಶುಪಾಲ ತಮ್ಲೀಕ್ ದಾರಿಮಿ, ಕುಶಾಲನಗರ ಪುರಸಭೆ ಸದಸ್ಯರಾದ ಪ್ರಮೋದ್ ಮುತ್ತಪ್ಪ, ಶೇಕ್ ಕಲೀಮುಲ್ಲಾ ಹಾಗೂ ಪ್ರಮುಖರು ಹಾಜರಿದ್ದರು.
ಕೊಡಗು ನಾಯಿಬ್ ಕಾಜಿûಯಾದ ಅಬ್ದುಲ್ಲಾ ಫೈಜಿû ಪ್ರಾರ್ಥಿಸಿದರು. ಯುನೈಟೆಡ್ ಎಜುಕೇಶನ್ ಟ್ರಸ್ಟ್ ಕಾರ್ಯದರ್ಶಿ ಪಿ.ಎಂಅಬ್ದುಲ್ಲಾ ಸ್ವಾಗತಿಸಿದರು.










