ಮಡಿಕೇರಿ ಜೂ.13 : ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ನಾಲ್ಕು ವರ್ಷಗಳ ಕಾಲ ಕುಲಪತಿಯಾಗಿ ಸಮರ್ಥ ಆಡಳಿತ ನೀಡಿ ನಿವೃತ್ತರಾದ ಪ್ರೊ. ಯಡಪಡಿತ್ತಾಯ ಅವರಿಗೆ ನಗರದ ಫೀಲ್ಡ್ ಮಾರ್ಪಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ಅಭಿನಂದನೆ ಸಲ್ಲಿಸಲಾಯಿತು.
ಈ ಸಂದರ್ಭ ಕಾಲೇಜಿನ ನಿವೃತ್ತ ಪ್ರಾಂಶುಪಾಲರ, ಮಾಜಿ ಸಿಂಡಿಕೇಟ್ ಸದಸ್ಯೆ ಡಾ. ಪಾರ್ವತಿ ಅಪ್ಪಯ್ಯ ಮಾತನಾಡಿ, ಪ್ರೊ. ಯಡಪಡಿತ್ತಾಯ ಅವರು ಅಧ್ಯಾಪಕರಾಗಿ, ಸಂಶೋಧಕರಾಗಿ, ಆಡಳಿತ ಅಧಿಕಾರಿಯಾಗಿ ಯಶಸ್ಸು ಸಾಧಿಸಿದರು. ಸಿಂಡಿಕೇಟ್ ಸಭೆಗಳನ್ನು ಅತ್ಯುತ್ತಮವಾಗಿ ನಿರ್ವಹಿಸುವ ಮೂಲಕ ಪ್ರತಿಯೊಂದು ಕಾರ್ಯಚಟುವಟಿಕೆಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಆ ಮೂಲಕ ಅದನ್ನು ಜಾರಿಗೆ ತರುತ್ತಿದ್ದರು. ನ್ಯಾಕ್ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪ್ರತಿಯೊಂದು ಪುಟಗಳನ್ನು ಓದಿ ಅದರಲ್ಲಿ ಇರುವ ತಪ್ಪು ಒಪ್ಪುಗಳನ್ನು ಗುರುತಿಸಿ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿಗೆ a+ ಶ್ರೇಣಿ ಬರುವಂತೆ ಮಾಡಿದ್ದರು. ಸರ್ವರನ್ನೂ ಸಮಾನವಾಗಿ ಕಾಣುತ್ತಿದ್ದರು ಇವರು ಕಾಲೇಜು ಅಧ್ಯಾಪಕರಿಗೂ ಅವರ ಶೈಕ್ಷಣಿಕ ಸಾಧನೆಯನ್ನು ಗುರುತಿಸಿ ಪ್ರೊಫೆಸರ್ ಗೆ ಪದೋನ್ನತಿಯನ್ನು ನೀಡಿದರು. ಕೊಡವ ಭಾಷೆಗೆ ಮಹತ್ವವನ್ನು ನೀಡುವ ಉದ್ದೇಶದಿಂದ ಕೊಡವ ಸ್ನಾತಕೋತ್ತರ ಪದವಿ, ಕೊಡವ ಭಾಷೆಯನ್ನು ಪದವಿ ತರಗತಿಗಳಿಗೆ ರೂಪಿಸುವ ಕಾರ್ಯವನ್ನು ಇವರ ಕಾಲಾವಧಿಯಲ್ಲಿ ಮಾಡಲಾಯಿತು. ಪ್ರಾದೇಶಿಕ ಭಾಷೆಗೆ ಮಾನ್ಯತೆ, 20ಕ್ಕೂ ಅಧಿಕ ಪುಸ್ತಕಗಳನ್ನು ಪ್ರಸಾರಾಂಗದ ಮೂಲಕ ಮಾಡಲಾಯಿತು.
ಶೈಕ್ಷಣಿಕ ಸ್ವಾತಂತ್ರ್ಯ, ಶೈಕ್ಷಣಿಕ ಅಭಿವೃದ್ಧಿಯನ್ನು ವಿಶ್ವವಿದ್ಯಾಲಯದ ಎಲ್ಲಾ ವಿಭಾಗಗಳಿಗೂ ಕಲ್ಪಿಸಿದರು. ಅವರ ನಾಲ್ಕು ವರ್ಷಗಳ ಅಧಿಕಾರವಧಿಯು ಅಭಿವೃದ್ಧಿಶೀಲ ವಿಶ್ವವಿದ್ಯಾನಿಲಯವಾಗಿ ಮಂಗಳೂರು ವಿಶ್ವವಿದ್ಯಾನಿಲಯವನ್ನು ರೂಪಿಸುವ ಕೆಲಸವನ್ನು ಅವರು ಮಾಡಿದ್ದಾರೆ. ಮಾತ್ರವಲ್ಲ
ಯಾವ ಹಗರಣಗಳಾಗಿರಬಹುದು, ಭ್ರಷ್ಟಾಚಾರವಾಗಿರಬಹುದು ಇವರ ಅಧಿಕಾರಾವಧಿಯಲ್ಲಿ ನಡೆಯಲಿಲ್ಲ. ಅವರ ಸಾಧನೆಯು ನಮಗೆ ಸ್ಫೂರ್ತಿ ಎಂದು ನುಡಿದರು.
ಡಾ. ಗಾಯತ್ರಿ ದೇವಿ ಮಂಗಳೂರು ಮತ್ತು ಕೊಡಗು ವಿಶ್ವವಿದ್ಯಾಲಯದ ಕೊನೆಯ ಕೊಂಡಿಯಾಗಿ, ಮೊದಲ ತುಳುವ ಭಾಷಿಕ ಕುಲಪತಿಗಳಾಗಿರುವುದೇ ಹೆಮ್ಮೆಯ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಪ್ರೊ. ಯಡಪಡಿತ್ತಾಯ ಅವರು, ವಿಶ್ವವಿದ್ಯಾನಿಲಯದ ಕೆಲಸ ಮಾಡುವಾಗ ಕೆಲವರ ಜೊತೆಯಲ್ಲಿ ಕಠಿಣವಾಗಿ ನಡೆದುಕೊಂಡಿದ್ದೇನೆ. ಆದರೂ ಯಾರ ಜೊತೆಯಲ್ಲಿ ಸಂಬಂಧವನ್ನು ಹಾಳು ಮಾಡಿಕೊಳ್ಳಲಿಲ್ಲ. ಪ್ರಜಾಪ್ರಭುತ್ವವಾದಿ ನೆಲೆಯಲ್ಲಿಯೇ ಆಡಳಿತ ನಡೆಸಿದ್ದೇನೆ ಎಂದರು.
ವಯಸ್ಸಿನ ಕಾರಣಕ್ಕಾಗಿ ನಿವೃತ್ತಿಯಾಗಿರಬಹುದು. ಬೌದ್ಧಿಕವಾಗಿ ನಿವೃತ್ತಿಯಾಗಲಾರೆ. ಕುಲಪತಿ ಹುದ್ದೆ ಹೂವಿನ ಹಾಸಿಗೆಯಲ್ಲ ಮುಳ್ಳಿನ ರಾಶಿ ಎಂದು ತಮ್ಮ ಅನುಭವಗಳನ್ನು ಹಂಚಿಕೊಂಡರು. ಸಂಶೋಧನೆ ತುಂಬಾ ಅಗತ್ಯವಾದ ಶೈಕ್ಷಣಿಕ ಚಟುವಟಿಕೆ, ಎಲ್ಲರೂ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಬೇಕು ಎಂದು ನುಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಅಶೋಕ ಎಸ್ ಹಾಲೂರು, ಯಾವುದೇ ವಿಶ್ವವಿದ್ಯಾನಿಲಯ ಕಟ್ಟಲು ಹಲವಾರು ಕೌಶಲ್ಯದ ಅಗತ್ಯ. ಕುಲಪತಿ ಹುದ್ದೆ ಸುಲಭದ್ದಲ್ಲ. ಸವಾಲಿನದ್ದು. ಅದನ್ನು ಪ್ರೊ. ಯಡಪಡಿತ್ತಾಯ ಅವರು ಯಶಸ್ವಿಯಾಗಿ ನಿರ್ವಹಿಸಿದ್ದಾರೆ ಎಂದು ಅಭಿಪ್ರಾಯಪಟ್ಟಿರು.
ಅಭಿನಂದನಾ ಪ್ರಮಾಣ ಪತ್ರವನ್ನು ಗಣಕವಿಜ್ಞಾನ ವಿಭಾಗದ ಸಹ ಪ್ರಾಧ್ಯಾಪಕ ರವಿಶಂಕರ್ ಓದಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಮೇಜರ್ ಪ್ರೊ. ರಾಘವ ಬಿ ಸ್ವಾಗತಿಸಿದರು. ಇಂಗ್ಲಿಷ್ ವಿಭಾಗದ ಪ್ರಾಧ್ಯಾಪಕ ಪೂಣಚ್ಚ ನಿರೂಪಿಸಿದರು.