ಪೊನ್ನಂಪೇಟೆ ಜೂ.13 : ಕೊಡಗು ವಿಶ್ವ ವಿದ್ಯಾನಿಲಯದ ಸಮಾಜ ಕಾರ್ಯ ಅಧ್ಯಯನ ವಿಭಾಗದ ವತಿಯಿಂದ ಪೊನ್ನಂಪೇಟೆ ತಾಲೂಕಿನ ಕೋತೂರಿನ ವಾಲ್ಮೀಕಿ ಗಿರಿಜನ ಆಶ್ರಮ ಶಾಲೆಯಲ್ಲಿ ಕಳೆದ ಏಳು ದಿನಗಳಿಂದ ನಡೆದ ಗ್ರಾಮೀಣ ಅಧ್ಯಯನ ಶಿಬಿರ ಭಾನುವಾರ ಸಮಾರೋಪಗೊಂಡಿತು.
ಕಾರ್ಯಕ್ರಮದಲ್ಲಿ ಕುಶಾಲನಗರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ವಿಘ್ನೇಶ್ ಭೂತನಕಾಡು ಮಾತನಾಡಿ, ಜನರ ಸಾಮಾಜಿಕ ಸಮಸ್ಯೆಗಳನ್ನು ಬಗೆಯರಿಸುವ ಕೆಲಸ ಮಾಡುವುದೇ ಸಮಾಜ ಕಾರ್ಯ ಆಗಿದ್ದು, ವಿದ್ಯಾರ್ಥಿಗಳು ಗ್ರಾಮೀಣ ಶಿಬಿರದ ಅಧ್ಯಯನದ ಮೂಲಕ ಇಲ್ಲಿನ ಜನರ ಸಮಸ್ಯೆಗಳ ಬಗ್ಗೆ ಬೆಳಕುಚೆಲ್ಲಿ ಸರ್ಕಾರದ ಗಮನ ಸೆಳೆಯಬೇಕೆಂದು ಸಲಹೆ ನೀಡಿದರು.
ಕೊಡಗು ಗುಡ್ಡಗಾಡು ಪ್ರದೇಶವಾಗಿದ್ದು, ಜಿಲ್ಲೆಯಲ್ಲಿ ಸಾಕಷ್ಟು ಸಮಸ್ಯೆಗಳಿದೆ. ಜಿಲ್ಲೆಯಲ್ಲಿ ಎಲ್ಲ ಜಾತಿ, ಜನಾಂಗದವರು ವಾಸಿಸುತ್ತಿದ್ದಾರೆ. ಹಾಡಿಗಳಲ್ಲಿ ವಾಸಿಸುತ್ತಿರುವ ಬುಡಕಟ್ಟು ಜನಾಂಗದವರಿಗೆ ಮೂಲ ಸೌಲಭ್ಯ ಸೇರಿದಂತೆ ಹಲವು ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಆದ್ದರಿಂದ ಈ ಬಗ್ಗೆ ವಿದ್ಯಾರ್ಥಿಗಳು ಅಧ್ಯಯನ ನಡೆಸಿ ಅದರ ಪರಿಹಾರ ಕಂಡುಕೊಳ್ಳುವಲ್ಲಿ ಮುಂದಾಗಬೇಕೆಂದು ಹೇಳಿದರು.
ಸುಂಟಿಕೊಪ್ಪ ಸ್ವಸ್ಥ ವಿಶೇಷ ಶಾಲೆಯ ಮುರುಗೇಶ್ ಮಾತನಾಡಿ ಸಮಾಜ ಕಾರ್ಯ ವಿದ್ಯಾರ್ಥಿಗಳು ಜನರ ಸಾಮಾಜಿಕ ಜೀವನದ ಅಧ್ಯಯನದಲ್ಲಿ ಹೆಚ್ಚಾಗಿ ತಮನ್ನು ತೊಡಗಿಸಿಕೊಳ್ಳಬೇಕು. ಪೋಷಕರು ಹಾಗೂ ಶಿಕ್ಷಕರ ಶ್ರಮವನ್ನು ನೆನಪಿನಲ್ಲಿಟ್ಟುಕೊಂಡು ತಮ್ಮ ವಿದ್ಯಾಭ್ಯಾಸದ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ಕೋತೂರು ವಾಲ್ಮೀಕಿ ಗಿರಿಜನ ಆಶ್ರಮ ಶಾಲೆಯ ಮುಖ್ಯ ಶಿಕ್ಷಕ ಪ್ರಶಾಂತ್ ಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಮೊದಲು ತಾವು ತಮ್ಮ ಸ್ವತಃ ದುಡಿಮೆಯಲ್ಲಿ ನಿಲ್ಲಬೇಕು. ನಂತರ ಸಮಾಜದಲ್ಲಿ ಬದಲಾವಣೆಯನ್ನು ತರಲು ಮುಂದಾಗಬೇಕು. ಛಲ ಇದ್ದರೆ ಏನು ಬೇಕಾದರೂ ಸಾಧಿಸಬಹುದು ಎಂದು ಹೇಳಿದರು.
ನಾಲ್ಕೇರಿ ಗ್ರಾಪಂ ಸದಸ್ಯ ಹಾಗೂ ಬೊಮ್ಮಾಡು ಹಾಡಿಯ ಮುಖಂಡ ಸೋಮಯ್ಯ ಮಾತನಾಡಿ ಕಳೆದ ಏಳು ದಿನಗಳಿಂದ ವಿದ್ಯಾರ್ಥಿಗಳು ಹಾಡಿಯ ಬಗ್ಗೆ ಸಾಕಷ್ಟು ವಿಚಾರಗಳನ್ನು ತಿಳಿದುಕೊಂಡಿದ್ದಾರೆ. ನಮ್ಮ ಹಾಡಿಯ ನಿವಾಸಿಗಳಿಗೆ ಹಾಗೂ ಆಶ್ರಮ ಶಾಲೆಯ ಮಕ್ಕಳಿಗೆ ಆರೋಗ್ಯ ತಪಾಸಣೆ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ನಡೆಸಿದ್ದಾರೆ. ಈ ಶಿಬಿರದಿಂದ ಸಂತೋಷವಾಗಿದೆ ಎಂದರು.
ಸಮಾಜ ಕಾರ್ಯ ವಿಭಾಗದ ಉಪನ್ಯಾಸಕ ಕೆ.ಜೆ.ರಾಬಿನ್ ಮಾತನಾಡಿ ವಿದ್ಯಾರ್ಥಿಗಳಿಗೆ ಗ್ರಾಮೀಣ ಅಧ್ಯಯನ ಶಿಬಿರ ಸೆಮಿಸ್ಟರ್‍ನ ಒಂದು ಭಾಗವಾಗಿದೆ. ಬಹುತೇಕ ವಿದ್ಯಾರ್ಥಿಗಳು ಗ್ರಾಮೀಣ ಭಾಗದವರೇ ಆಗಿದ್ದಾರೆ. ಆದ್ದರಿಂದ ವಿಶೇಷತೆ ಇರಬೇಕೆಂಬ ನಿಟ್ಟಿನಲ್ಲಿ ಹಾಡಿಯ ಸಮೀಪದ ಆಶ್ರಮ ಶಾಲೆಯಲ್ಲಿ ಶಿಬಿರ ಆಯೋಜಿಸಿದ್ದೇವೆ. ಶಿಬಿರದ ಮೂಲಕ ವಿದ್ಯಾರ್ಥಿಗಳು ಬುಡಕಟ್ಟು ಜನರ ಜೀವನ ಶೈಲಿ, ಸಮಸ್ಯೆಗಳ ಬಗ್ಗೆ ತಿಳಿದುಕೊಂಡಿದ್ದಾರೆ ಎಂದು ತಿಳಿಸಿದರು.
ಶಿಬಿರದ ಬಗ್ಗೆ ಸಮಾಜ ಕಾರ್ಯ ಅಧ್ಯಯನ ವಿಭಾಗದ ವಿದ್ಯಾರ್ಥಿ ಪುಷ್ಪಕ್ ಕುಮಾರ್ ತಮ್ಮ ಅನುಭವ ಹಂಚಿಕೊಂಡು, ನಾವು ಈ ಆಶ್ರಮ ಶಾಲೆಯಲ್ಲಿ ಶಿಬಿರ ನಡೆಸಿದ ಬಳಿಕ ಐದು ವಿದ್ಯಾರ್ಥಿಗಳನ್ನು ಮರಳಿ ಶಾಲೆಗೆ ಕರೆ ತರುವ ಪ್ರಯತ್ನವನ್ನು ಮಾಡಿದ್ದೇವೆ ಎಂದು ಸಂಭ್ರಮ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸಮಾಜ ಕಾರ್ಯ ಅಧ್ಯಯನ ವಿಭಾಗದ ಉಪನ್ಯಾಸಕಿ ಹರಿಣಾಕ್ಷಿ ಇದ್ದರು.
ಶಿಬಿರದ ಅಂಗವಾಗಿ ವಾಲ್ಮೀಕಿ ಗಿರಿಜನ ಆಶ್ರಮ ಶಾಲೆಯ ವಿದ್ಯಾರ್ಥಿಗಳಿಗೆ ಆಯೋಜಿಲಾಗಿದ್ದ ಆಟೋಟ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ವಿದ್ಯಾರ್ಥಿಗಳಾದ ಪ್ರಿಯಾಂಕ, ಜನನಿ ಪ್ರಾರ್ಥಿಸಿದರು. ನಾಗಲಕ್ಷ್ಮಿ ನಿರೂಪಿಸಿ, ಐಶ್ವರ್ಯ ಸ್ವಾಗತಿಸಿ, ರಶ್ಮಿ ವರದಿ ವಾಚಿಸಿದರು. ದೀಕ್ಷಿತಾ ವಂದಿಸಿದರು.









