ಮಡಿಕೇರಿ ಮೇ.13 : ಉದ್ಯೋಗ ಖಾತ್ರಿ ಯೋಜನೆಯಲ್ಲಿ ಒಂದು ಗ್ರಾಮೀಣ ಕುಟುಂಬಕ್ಕೆ 100 ದಿನಗಳ ಕೆಲಸವನ್ನು ನೀಡುತ್ತಿದ್ದು, ಅರ್ಹರೆಲ್ಲರೂ ಬಳಸಿಕೊಳ್ಳುವಂತಾಗಬೇಕು ಎಂದು ಜಿ.ಪಂ.ಸಿಇಒ ಡಾ.ಎಸ್.ಆಕಾಶ್ ತಿಳಿಸಿದ್ದಾರೆ.
ವಿರಾಜಪೇಟೆ ತಾಲ್ಲೂಕು ಪಂಚಾಯಿತಿ ಸಾಮಥ್ರ್ಯ ಸೌಧದಲ್ಲಿ ವಿವಿಧ ಇಲಾಖೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈಗಾಗಲೇ ನರೇಗಾ ಯೋಜನೆಯಡಿ ಹಲವು ಅಭಿವೃದ್ಧಿ ಕೆಲಸಗಳು ಗ್ರಾಮೀಣ ಭಾಗದಲ್ಲಿ ನಡೆಯುತ್ತಿದ್ದು, ಪ್ರಮುಖವಾಗಿ “ಅಮೃತ್ ಸರೋವರ” ಕಾಮಗಾರಿ ಪೂರ್ಣಗೊಳ್ಳುವಂತೆ ಕ್ರಮವಹಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ವಿವಿಧ ಇಲಾಖೆಗಳ ಅಭಿವೃದ್ಧಿ ಸಂಬಂಧಿಸಿದಂತೆ ಮಾತನಾಡಿ ಜಲ ಜೀವನ್ ಮೀಷನ್ ಯೋಜನೆಯಡಿ ಬಾಕಿ ಇರುವ ಎಲ್ಲಾ ಕಾಮಗಾರಿ ಕೆಲಸಗಳನ್ನು ತುರ್ತಾಗಿ ಪೂರ್ಣಗೊಳಿಸಿ ನೀರಿನ ಸಮಸ್ಯೆಗಳು ಬರದಂತೆ ನೋಡಿಕೊಳ್ಳಲು ತಿಳಿಸಿದರು.
ಸ್ವಚ್ಛ ಭಾರತ್ ಮಿಷನ್ ಗ್ರಾಮೀಣ ಯೋಜನೆಗೆ ಸಂಬಂಧಿಸಿದಂತೆ ಗ್ರಾಮ ಪಂಚಾಯಿತಿಯಲ್ಲಿ ವಿಶೇಷ ಗ್ರಾಮ ಸಭೆ ನಡೆಸಿ ಮಾದರಿ ಗ್ರಾಮಗಳನ್ನಾಗಿ ಮಾಡಲು ಶ್ರಮಿಸಬೇಕು ಎಂದರು.
ಇದೀಗ ಶಾಲೆಗಳು ಪ್ರಾರಂಭವಾಗಿದ್ದು, ಡಿಜಿಟಲ್ ಗ್ರಂಥಾಲಯಗಳಿಗೆ ಶಾಲಾ ಮಕ್ಕಳು ಶೇ.100 ಸಂಖ್ಯೆಯಲ್ಲಿ ಭಾಗವಹಿಸುವಂತೆ ಕ್ರಮವಹಿಸಬೇಕು. ಜೊತೆಗೆ ವಿಶೇಷ ಚಟುವಟಿಕೆ ಕೈಗೊಳ್ಳುವಂತಾಗಬೇಕು ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗ್ರಾ.ಪಂ ಗಳಲ್ಲಿ ಎಲ್ಲಾ ಯೋಜನೆಗಳನ್ನು ಸಮರ್ಥವಾಗಿ ಅಭಿವೃದ್ಧಿಪಡಿಸಿ ಯಾವುದೇ ಕುಂದುಕೊರತೆಗಳು ಬಾರದಂತೆ ನೋಡಿಕೊಳ್ಳಲು ವಿವಿಧ ಇಲಾಖೆಯ ಅಧಿಕಾರಿಗಳಿಗೆ ಸಲಹೆ ಸೂಚನೆ ನೀಡಿದರು.
ಇದೇ ಸಂದರ್ಭದಲ್ಲಿ ಉಪ ಕಾರ್ಯದರ್ಶಿಗಳಾದ ಧನರಾಜ್, ಮುಖ್ಯ ಯೋಜನಾಧಿಕಾರಿ ರಾಜ್‍ಗೋಪಾಲ್, ತಾ.ಪಂ.ಇಒ ಕೆ.ಸಿ.ಅಪ್ಪಣ್ಣ, ವಿವಿಧ ಇಲಾಖೆಗಳ ತಾಲ್ಲೂಕು ಮಟ್ಟದ ಅಧಿಕಾರಿಗಳು, ಗ್ರಾ.ಪಂ.ಅಭಿವೃದ್ಧಿ ಅಧಿಕಾರಿಗಳು, ತಾ.ಪಂ.ಸಿಬ್ಬಂದಿ ವರ್ಗದವರು, ಮನರೇಗಾ ಯೋಜನೆಯ ಎಲ್ಲಾ ತಾಂತ್ರಿಕ ಸಿಬ್ಬಂದಿ ವರ್ಗದವರು ಹಾಗೂ ಇತರರು ಹಾಜರಿದ್ದರು.









