ಮಡಿಕೇರಿ ಜೂ.14 : ವಿದ್ಯುತ್ ದರವನ್ನು ನೂತನ ಕಾಂಗ್ರೆಸ್ ಸರ್ಕಾರವೇ ಏರಿಕೆ ಮಾಡಿದ್ದು, ವಿನಾಕಾರಣ ಹಿಂದಿನ ಬಿಜೆಪಿ ಸರ್ಕಾರದ ಮೇಲೆ ಗೂಬೆ ಕೂರಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಜಿಲ್ಲಾ ಬಿಜೆಪಿ ವಕ್ತಾರ ಮಹೇಶ್ ಜೈನಿ, ವಿದ್ಯುತ್ ದರ ಇಳಿಕೆಗೆ ಒತ್ತಾಯಿಸಿ ಪಕ್ಷದ ವತಿಯಿಂದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ಬಿಜೆಪಿ ಸರ್ಕಾರದ ಮೇಲೆ ಗೂಬೆ ಕೂರಿಸುವ ಮೂಲಕ ಕಾಂಗ್ರೆಸ್ ಜನರ ಹಾದಿ ತಪ್ಪಿಸುತ್ತಿದೆ ಎಂದು ಟೀಕಿಸಿದರು.
ವಿದ್ಯುತ್ ದರವನ್ನು ಇಳಿಕೆ ಮಾಡುವ ಸಂಪೂರ್ಣ ಅಧಿಕಾರ ರಾಜ್ಯ ಸರ್ಕಾರಕ್ಕಿದೆ. ದುಬಾರಿ ವಿದ್ಯುತ್ ದರದಿಂದ ಬೇಸತ್ತಿರುವ ಜನರ ಹಿತ ದೃಷ್ಟಿಯಿಂದ ದರವನ್ನು ತಕ್ಷಣ ಇಳಿಕೆ ಮಾಡಬೇಕು. ತಪ್ಪಿದಲ್ಲಿ ದರ ಇಳಿಕೆಯಾಗುವಲ್ಲಿಯವರೆಗೆ ಬಿಜೆಪಿ ನಿರಂತರ ಹೋರಾಟ ನಡೆಸಲಿದೆ ಎಂದರು.
ಕುಡಿಯುವ ನೀರಿನ ಸಮಸ್ಯೆಯನ್ನು ಆಲಿಸಲು ಮಡಿಕೇರಿಯ ನೂತನ ಶಾಸಕರು ಕೂಟುಹೊಳೆಗೆ ಭೇಟಿ ನೀಡಿದ್ದ ಸಂದರ್ಭ ಮಡಿಕೇರಿ ನಗರಸಭೆಯ ಆಡಳಿತ ಮಂಡಳಿ ಬಗ್ಗೆ ಅಸಂಬದ್ಧ ಹೇಳಿಕೆ ನೀಡಿದ್ದಾರೆ. ತಮ್ಮ ಬೆಂಬಲಿಗರ ಮಾತು ಕೇಳಿಕೊಂಡು ಇಲ್ಲಸಲ್ಲದ ಆರೋಪಗಳನ್ನು ಮಾಡಿದರೆ ಶಾಸಕರ ಘನತೆಗೆ ಶೋಭೆ ತರುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಆಡಳಿತ ಮಂಡಳಿಯ ಗಮನಕ್ಕೆ ಬಾರದೆ ಕೆಲವು ತಾಂತ್ರಿಕ ತೊಂದರೆಗಳಿಂದ ಕುಡಿಯುವ ನೀರಿನ ಪೂರೈಕೆಯಲ್ಲಿ ಅಡಚಣೆ ಉಂಟಾಗಿದ್ದು, ಇದಕ್ಕೆ ವಿಷಾದ ವ್ಯಕ್ತಪಡಿಸುತ್ತೇವೆ. ಇದನ್ನೇ ನೆಪ ಮಾಡಿಕೊಂಡು ನಗರಸಭೆಯನ್ನು ಸೂಪರ್ ಸೀಡ್ ಮಾಡಬೇಕೆನ್ನುವ ಅರ್ಥಹೀನ ಪ್ರಸ್ತಾಪ ಮಾಡುವುದು ಸರಿಯಲ್ಲ, ಈ ರೀತಿಯ ನಡೆಗಳನ್ನು ಶಾಸಕರು ಮೊದಲು ಬಿಡಲಿ ಎಂದು ಮಹೇಶ್ ಜೈನಿ ಒತ್ತಾಯಿಸಿದರು.









