ಪಾವಗಡ ಜೂ.14 : ಪಾವಗಡ ತಿರುಮಣಿಯಲ್ಲಿನ ಸೋಲಾರ್ ಪಾರ್ಕ್ ಅನ್ನು 10 ಸಾವಿರ ಎಕರೆಗೆ ವಿಸ್ತರಣೆ ಮಾಡಲು ಸರ್ಕಾರ ತೀರ್ಮಾನಿಸಿದೆ ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ತಿಳಿಸಿದರು.
ಇಂದು ಇಂಧನ ಸಚಿವ ಕೆ ಜೆ ಜಾರ್ಜ್ ಜೊತೆ ಪಾವಗಡ ಸೋಲಾರ್ ಪಾರ್ಕ್ ವೈಮಾನಿಕ ಸಮೀಕ್ಷೆ ನಡೆಸಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಯೋಜನೆಯನ್ನು ವಿಸ್ತರಿಸಲು ಸರ್ಕಾರ ನಿರ್ಧರಿಸಿದೆ ಎಂದರು.
ಇದು ಏಷ್ಯಾದ ಅತಿ ದೊಡ್ಡ ಸೋಲಾರ್ ಪಾರ್ಕ್ ಆಗಿದ್ದು, ಇದನ್ನು ವಿಸ್ತರಣೆ ಮಾಡಲು ಸರ್ಕಾರ ಸಿದ್ಧವಿದೆ. ಈ ಭಾಗದ ಜನರು ತಮ್ಮ ಭೂಮಿಯನ್ನು ಸ್ವಯಂ ಪ್ರೇರಿತವಾಗಿ ಬಿಟ್ಟುಕೊಟ್ಟರೆ ಕೇಂದ್ರಕ್ಕೆ ಈ ಕುರಿತು ಪ್ರಸ್ತಾವನೆ ಸಲ್ಲಿಸುತ್ತೇವೆ ಎಂದು ತಿಳಿಸಿದರು.
ಕಲಬುರ್ಗಿ, ರಾಯಚೂರು ಹಾಗೂ ಬೇರೆ ಜಿಲ್ಲೆಗಳಿಂದಲೂ ಸೋಲಾರ್ ಪಾರ್ಕ್ ನಿರ್ಮಾಣಕ್ಕೆ ಬೇಡಿಕೆ ಬಂದಿದ್ದು, ಆದಷ್ಟು ಬೇಗ ಈ ಭಾಗದ ಜನರೊಂದಿಗೆ ಚರ್ಚೆ ಮಾಡಿ ತೀರ್ಮಾನ ಮಾಡಲಾಗುವುದು. ಕಳೆದ ಬಾರಿ ಪ್ರಕ್ರಿಯೆ ಪೂರ್ಣಗೊಂಡ ನಂತರ ಜಮೀನು ನೀಡದವರು ನನ್ನ ಬಳಿ ಬಂದು ತಮ್ಮ ಜಮೀನನ್ನೂ ಬಳಸಿಕೊಳ್ಳಿ ಎಂದು ಕೋರಿದರು.
ತಾಲೂಕಿನ ರೈತರು ಮುಂದೆ ಬಂದು ಜಮೀನು ನೀಡಿದರೆ ಸೋಲಾರ್ ಪಾರ್ಕ್ ವಿಸ್ತರಣೆ ಮಾಡಬಹುದು. ಜಮೀನು ರೈತರ ಹೆಸರಿನಲ್ಲೇ ಇರುತ್ತದೆ ಅದಕ್ಕೆ ಸೂಕ್ತ ಬಾಡಿಗೆಯನ್ನು ನೀಡಲಾಗುವುದು. ಬಾಡಿಗೆ ಆಧಾರದ ಮೇಲೆ ಸಾಲ ಸೌಲಭ್ಯವೂ ಸಿಗಲಿದೆ. ನಾವೇ ನಿಂತು ಪಾಣಿ, ಖಾತೆ ಎಲ್ಲಾ ಮಾಡಿಸಿಕೊಡುತ್ತೇವೆ. ಯಾರಿಗೂ ಲಂಚ ನೀಡುವ ಅಗತ್ಯವಿಲ್ಲ ಎಂದರು.