ಮಡಿಕೇರಿ ಜೂ.16 : ಜಿಲ್ಲಾ ಕೇಂದ್ರ ಮಡಿಕೇರಿ ನಗರ ಪ್ರದೇಶದಲ್ಲಿ ಕಳೆದ ಹಲವು ವರ್ಷಗಳಿಂದ ಸಂಗ್ರಹವಾಗಿರುವ ಭಾರೀ ಪ್ರಮಾಣದ ತ್ಯಾಜ್ಯ ವಿಲೇವಾರಿ ಸಂಬಂಧ ಮಡಿಕೇರಿ ನಗರಸಭೆ ಸಲ್ಲಿಸಿದ್ದ 6.69 ಕೋಟಿ ರೂ. ವೆಚ್ಚದ ಯೋಜನಾ ವರದಿಗೆ ಪೌರಾಡಳಿತ ನಿರ್ದೇಶನಾಲಯ ಷರತ್ತು ಬದ್ಧವಾದ ಆಡಳಿತಾತ್ಮಕ ಅನುಮೋದನೆಯನ್ನು ನೀಡಿದೆ ಎಂದು ನಗರಸಭಾ ಅಧ್ಯಕ್ಷರಾದ ಅನಿತಾ ಪೂವಯ್ಯ ತಿಳಿಸಿದ್ದಾರೆ.
ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ನ್ಯಾಯಾಲಯವು 2022ರ ಅಕ್ಟೋಬರ್ 13 ರಂದು ನೀಡಿರುವ ಆದೇಶದಲ್ಲಿ, ಪಾರಂಪರಿಕ ತ್ಯಾಜ್ಯ ವಸ್ತುಗಳನ್ನು ತೆರವುಗೊಳಿಸಿ ಗಣನೀಯ ಪ್ರಗತಿ ಸಾಧಿಸಿ 6 ತಿಂಗಳಿಗೊಮ್ಮೆ ಅನುಪಾಲನಾ ವರದಿಯನ್ನು ಸಲ್ಲಿಸುವಂತೆ ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಿಗೆ ನಿರ್ದೇಶನವನ್ನು ನೀಡಿತ್ತು. ಅದರಂತೆ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹಲವಾರು ವರ್ಷಗಳಿಂದ ಶೇಖರಣೆಯಾಗಿರುವ ಹಳೆಯ, ಪಾರಂಪರಿಕ ತ್ಯಾಜ್ಯ ವಸ್ತುಗಳನ್ನು ತ್ವರಿತಗತಿಯಲ್ಲಿ ಬಯೋಮೈನಿಂಗ್ ಮತ್ತು ಬಯೋರಿಮಿಡಿಯೇಷನ್ ಮೂಲಕ ತೆರವುಗೊಳಿಸುವ ಕಾರ್ಯ ಅಗತ್ಯವಾಗಿ ನಡೆಯಬೇಕಿದೆ.
::: ನಗರಸಭೆಯಿಂದ ಪ್ರಸ್ತಾವನೆ ::: ಹಸಿರು ನ್ಯಾಯಾಧೀಕರಣದ ಆದೇಶದ ಹಿನ್ನೆಲೆ ಮಡಿಕೇರಿ ನಗರಸಭೆಯ ಪೌರಾಯುಕ್ತರು ಪ್ರಸಕ್ತ ಸಾಲಿನ ಮೇ 21 ರಂದು ಸಚ್ಛ ಭಾರತ ಮಿಷನ್ 2.0 ಯೋಜನೆಯ ಮಾರ್ಗಸೂಚಿಗಳ ರೀತ್ಯಾ ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಶೇಖರಣೆಯಾಗಿರುವ 60,458 ಟನ್ ಪ್ರಮಾಣದ ತ್ಯಾಜ್ಯವನ್ನು ತೆರವುಗೊಳಿಸಲು 6.69ಕೋಟಿ ವೆಚ್ಚದ ಅಂದಾಜು ಪಟ್ಟಿಯನ್ನು ಒಳಗೊಂಡಂತೆ ವಿಸ್ತೃತ ಯೋಜನಾ ವರದಿಯನ್ನು ಪೌರಾಡಳಿತ ನಿರ್ದೇಶನಾಲಯಕ್ಕೆ ಸಲ್ಲಿಸಿದ್ದರು.
::: ತಾಂತ್ರಿಕ ಸಲಹಾ ಸಮಿತಿ ಸಭೆಯಲ್ಲಿ ಪರಿಶೀಲನೆ ::: ಮಡಿಕೇರಿ ನಗರಸಭೆ ಸಲ್ಲಿಸಿದ ತ್ಯಾಜ್ಯ ವಿಲೇವಾರಿಯ ಯೋಜನಾ ವರದಿ ಪಾರಂಪರಿಕ ತ್ಯಾಜ್ಯದ ರಾಜ್ಯ ಮಟ್ಟದ ತಾಂತ್ರಿಕ ಸಲಹಾ ಸಮಿತಿ ಸಭೆಯಲ್ಲಿ ಪರಿಶೀಲನಗೆ ಒಳಪಟ್ಟಿತು. ಯೋಜನೆಯ ಪ್ರಸ್ತಾವನೆ 5 ಕೋಟಿಗೂ ಮೇಲ್ಪಟ್ಟಿರುವುದರಿಂದ ಷರತ್ತು ಬದ್ಧವಾಗಿ ಆಡಳಿತಾತ್ಮಕವಾದ ಅನುಮೋದನೆಯನ್ನು ಇದೀಗ ನೀಡಲಾಗಿದೆ.
::: ಯಾವೆಲ್ಲ ಷರತ್ತುಗಳು ::: ತ್ಯಾಜ್ಯ ವಿಲೇವಾರಿಯ ಸಂದರ್ಭ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ತ್ಯಾಜ್ಯ ನಿರ್ವಹಣೆಗೆ ನೀಡಿರುವ ಮಾರ್ಗಸೂಚಿಗಳಂತೆ ಕೆಲಸ ನಿರ್ವಹಿಸಬೇಕಾಗುತ್ತದೆ, ಪಾರಂಪರಿಕ ತ್ಯಾಜ್ಯ ಸಂಸ್ಕರಣಾ ಹಾಗೂ ವಿಲೇವಾರಿ ಘಟಕಗಳಲ್ಲಿ ತ್ಯಾಜ್ಯವನ್ನು ಪರಿಸರಕ್ಕೆ ಹಾನಿಯುಂಟಾಗದಂತೆ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಬೇಕು, ಬಯೋಮೈನಿಂಗ್ ಮತ್ತು ಬಯೋರಿಮಿಡಿಯೇಷನ್ ಕೆಲಸ ನಿರ್ವಹಿಸುವ ಹಂತಗಳಲ್ಲಿ ಅಗ್ನಿಅವಘಡಗಳು ಸಂಭವಿಸದಂತೆ ಎಚ್ಚರ ವಹಿಸಬೇಕು, ತ್ಯಾಜ್ಯ ವಿಲೇ ಸಂದರ್ಭ ದಹನ ಯೋಗ್ಯ ಮತ್ತು ನಿಸತ್ವ ತ್ಯಾಜ್ಯವನ್ನು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾರ್ಗಸೂಚಿಗಳಂತೆ ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು, ಸ್ವಚ್ಛ ಭಾರತ ಮಿಷನ್ ಯೋಜನೆಯ ಮರ್ಗಸೂಚಿಗಳ ಅನ್ವಯ ಕೇಂದ್ರ ರಾಜ್ಯ ಸರ್ಕಾರದ ಪಾಲಿನ ಜೊತೆಗೆ ನಗರ ಸ್ಥಳೀಯ ಸಂಸ್ಥೆಯ ಪಾಲನ್ನು ಕ್ರೋಢೀಕರಿಸಿಕೊಂಡು ಕಾಮಗಾರಿ ನಿರ್ವಹಿಸಬೇಕೆನ್ನುವ ಷರತ್ತುಗಳನ್ನು ವಿಧಿಸಲಾಗಿದೆ.
::: ಯೋಜನಾ ವೆಚ್ಚ ಯಾವ ರೀತಿ ::: ತ್ಯಾಜ್ಯ ವಿಲೇವಾರಿಯ 6.69 ಕೋಟಿ ಯೋಜನೆಯಡಿ ಸ್ವಚ್ಛ ಭಾರತ್ ಮಿಷನ್‍ನಡಿ ಕೇಂದ್ರ ಸರ್ಕಾರ 3.34 ಕೋಟಿ, ರಾಜ್ಯ ಸರ್ಕಾರದ ಪಾಲು 2.20 ಕೋಟಿ ಹಾಗೂ ನಗರಸಭೆ ಸುಮಾರು 1.13 ಕೋಟಿ ರೂ.ಗಳನ್ನು ಭರಿಸಬೇಕಾಗುತ್ತದೆ ಎಂದು ಅನಿತಾ ಪೂವಯ್ಯ ಮಾಹಿತಿ ನೀಡಿದ್ದಾರೆ.










