ಮಡಿಕೇರಿ ಜೂ.16 : ಕೊಡವ ಬುಡಕಟ್ಟು ಜನಾಂಗದ ಅಧ್ಯಯನಕ್ಕೆ ಪೂರಕವಾದ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವಿರಾಜಪೇಟೆ ಕ್ಷೇತ್ರದ ನೂತನ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಅವರಿಗೆ ಮನವಿ ಪತ್ರ ಸಲ್ಲಿಸಿದೆ.
ಬೆಂಗಳೂರಿನ ಆರ್ ಟಿ ನಗರದಲ್ಲಿರುವ ಶಾಸಕರ ಕಚೇರಿಯಲ್ಲಿ ಭೇಟಿಯಾದ ಸಿಎನ್ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ನೇತೃತ್ವದ ನಿಯೋಗ ಸಂಘಟನೆಯ ಸುದೀರ್ಘ ಅವಧಿಯ ಹೋರಾಟ ಮತ್ತು ಕೊಡವರ ಪರವಾದ ನಿಲುವುಗಳನ್ನು ವಿವರಿಸಿತು.
ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾಗಿ ಆಯ್ಕೆಯಾದ ಪೊನ್ನಣ್ಣ ಅವರಿಗೆ ಅಭಿನಂದನೆ ಸಲ್ಲಿಸಿದ ನಾಚಪ್ಪ, ಸಿಎನ್ಸಿ ಬೇಡಿಕೆಗಳಿಗೆ ಸ್ಪಂದಿಸುವಂತೆ ಮನವಿ ಮಾಡಿದರು.
ಕೊಡವ ಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆಯ ನ್ಯಾಯಸಮ್ಮತ, ಸಾಂವಿಧಾನಿಕ ಬೇಡಿಕೆಯ ಪರ ಅರ್ಥಶಾಸ್ತ್ರಜ್ಞ ಹಾಗೂ ಕೇಂದ್ರದ ಮಾಜಿ ಸಚಿವ ಡಾ.ಸುಬ್ರಮಣಿಯನ್ ಸ್ವಾಮಿ ಅವರು ಕಾನೂನು ಹೋರಾಟ ನಡೆಸುತ್ತಿರುವ ಬಗ್ಗೆ ಗಮನ ಸೆಳೆದರು.
ಕಾನೂನುಬದ್ಧವಾಗಿ ಬುಡಕಟ್ಟು ಸಮುದಾಯವನ್ನು ರಕ್ಷಿಸಲು ಕೊಡವ ಜನಾಂಗದ ಸಮಗ್ರ, ನಿಖರ ಮತ್ತು ನ್ಯಾಯೋಚಿತ ಜನಾಂಗೀಯ ಮರು-ಅಧ್ಯಯನಕ್ಕೆ ಒತ್ತು ನೀಡಬೇಕು. ವಿಧಾನಸಭಾ ಚುನಾವಣೆಯ ತಮ್ಮ ಪ್ರಣಾಳಿಕೆಯಲ್ಲಿ ಈ ಭರವಸೆಯನ್ನು ನೀಡಲಾಗಿತ್ತು ಎಂದು ನಾಚಪ್ಪ ಹೇಳಿದರು.
ಸಿಎನ್ಸಿ ಪ್ರಮುಖರಾದ ಕಲಿಯಂಡ ಪ್ರಕಾಶ್, ಲೆಫ್ಟಿನೆಂಟ್ ಕರ್ನಲ್ ಪಾರ್ವತಿ, ಪಟ್ಟಮಾಡ ಕುಶ, ಪಟ್ಟಡ ರಂಜನ್, ಅಜ್ಜಿಕುಟ್ಟೀರ ಲೋಕೇಶ್, ಜಮ್ಮಡ ಮೋಹನ್, ಚಂಬಂಡ ಜನತ್, ಅರೆಯಡ ಗಿರೀಶ್, ಕಾಂಡೆರ ಸುರೇಶ್, ಬೊಳ್ಳಾರಪಂಡ ಬೋಪಣ್ಣ, ಪಾವರ್ಂಗಡ ನವೀನ್, ಅಲ್ಮಂಡ ಜೈ, ಪಟ್ಟಮಾಡ ಅಶೋಕ್, ಮಂದಪಂಡ ಮನೋಜ್, ಬೇಪಾಡಿಯಂಡ ದಿನು, ಕಿರಿಯಮಾಡ ಶರಿನ್, ಕಿರಿಯಮಾಡ ಶಾನ್ ನಿಯೋಗದಲ್ಲಿದ್ದರು.