ಮಡಿಕೇರಿ ಜೂ.16 : ಕೊಡಗು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಅಶೋಕ ಸಂಗಪ್ಪ ಆಲೂರು ಅವರು ಮಾಜಿ ಕಾನೂನು ಸಚಿವ ಎಂ.ಸಿ.ನಾಣಯ್ಯ ಅವರನ್ನು ಅವರ ಸ್ವಗೃಹದಲ್ಲಿ ಇಂದು ಔಪಚಾರಿಕವಾಗಿ ಭೇಟಿಯಾದರು. ಕೊಡಗು ವಿಶ್ವವಿದ್ಯಾಲಯದ ಸರ್ವತೋಮುಖ ಬೆಳವಣಿಗೆಗೆ ಸಹಕರಿಸುವ ಯೋಜನೆಗಳನ್ನು ರೂಪಿಸುವಂತೆ ಕೋರಿ ಸರಕಾರದ ಮುಂದೆ ಆಶೋತ್ತರಗಳನ್ನು ಮುಂದಿಡುವಂತೆ ಅವರಲ್ಲಿ ಕೇಳಿಕೊಳ್ಳಲಾಯಿತು. ಮುಂದಿನ ಶೈಕ್ಷಣಿಕ ವರ್ಷಕ್ಕೆ ಕೊಡಗು ವಿಶ್ವವಿದ್ಯಾಲಯದ ಅಧೀನದಲ್ಲಿರುವ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಎಪ್ಪತ್ತೈದು ವರ್ಷಗಳನ್ನು ಪೂರೈಸುತ್ತಿದ್ದು ಸರಕಾರವು ಕಾಲೇಜಿನ ಮೂಲಭೂತ ಸೌಕರ್ಯಗಳನ್ನು ಮೇಲ್ದರ್ಜೆಗೇರಿಸುವಂತ ಯೋಜನೆಗಳನ್ನು ಕೈಗೊಳ್ಳಬೇಕು. ಆ ಮೂಲಕ ಕೊಡಗಿನ ವಿದ್ಯಾರ್ಥಿಗಳು ರಾಜ್ಯದ ಬೇರೆ ಜಿಲ್ಲೆಗೆ ಉತ್ತಮ ಶಿಕ್ಷಣವನ್ನರಸಿ ಹೋಗದಂತೆ ಕಾರ್ಯಚಟುವಟಿಕೆಗಳನ್ನು ರೂಪಿಸಬೇಕು ಎಂಬ ಚರ್ಚೆಗಳನ್ನು ನಡೆಸಲಾಯಿತು.
ಹೊಸದಾಗಿ ಆರಂಭವಾಗಿರುವ ವಿಶ್ವವಿದ್ಯಾಲಯಗಳ ಅರ್ಥಿಕ ಸ್ಥಿತಿಗತಿ ಸುಧಾರಿಸುವ, ಅನುದಾನಗಳನ್ನು ಪಡೆಯುವ, ಆ ಮೂಲಕ ಕೊಡಗಿನ ಶೈಕ್ಷಣಿಕ ಪ್ರಗತಿಗೆ ಸಹಕಾರಿಯಾಗುವಂತಹ ದೂರದೃಷ್ಟಿತ್ವ ಇರುವ ಅಂಶಗಳನ್ನು ಈ ನಿಯೋಗವು ಚರ್ಚಿಸಿತು. ಕೊಡಗು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವರಾದ ಡಾ. ಸೀನಪ್ಪ ಅವರು, ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲರಾದ ಮೇಜರ್ ಪ್ರೊ. ರಾಘವ ಬಿ ಅವರು ಚರ್ಚೆಯಲ್ಲಿ ಭಾಗವಹಿಸಿದರು. ಹೂಗುಚ್ಚ ನೀಡಿ ಎಂ.ಸಿ.ನಾಣಯ್ಯ ಅವರನ್ನು ಗೌರವಿಸಲಾಯಿತು.