ಮಡಿಕೇರಿ ಜೂ.17 : ಭಾಗಮಂಡಲದ ಸಮೀಪ ಕೋಪಟ್ಟಿಯಲ್ಲಿ ಕಾಡಾನೆಗಳ ದಾಂಧಲೆ ಮಿತಿ ಮೀರಿದೆ. ಗ್ರಾಮದ ವಿವಿಧ ತೋಟಗಳಲ್ಲಿ ಕಾಣಿಸಿಕೊಂಡ ಆರಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಬಾಳೆ, ಅಡಿಕೆ ಮತ್ತಿತರ ಸಸಿಗಳನ್ನು ಧ್ವಂಸ ಮಾಡಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯ ಅಧಿಕಾರಿಗಳು ಗ್ರಾಮಸ್ಥರ ಸಹಕಾರದೊಂದಿಗೆ ಕಾಡಾನೆಗಳನ್ನು ಓಡಿಸುವಲ್ಲಿ ಯಶಸ್ವಿಯಾದರು. ಅರಣ್ಯ ಇಲಾಖೆ ಕಾಡಾನೆ ಉಪಟಳ ತಡೆಗೆ ಶಾಶ್ವತ ಪರಿಹಾರ ಸೂಚಿಸಬೇಕೆಂದು ನಷ್ಟಕ್ಕೊಳಗಾದ ಕೋಪಟ್ಟಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.










