ಸೋಮವಾರಪೇಟೆ ಜೂ.9 : ಪ್ರಾಣಿ, ಪಕ್ಷಿಗಳಿಂದ ಪರಿಸರ ಮತ್ತು ಪ್ರಕೃತಿ ನಾಶವಾಗುತ್ತಿಲ್ಲ. ಪ್ರಕೃತಿ ನಾಶದಲ್ಲಿ ಮಾನವನ ಕೊಡುಗೆ ಅಪಾರವಾದದ್ದು ಎಂದು ಕಲಾವಿದರು ಮತ್ತು ಪಕ್ಷಿತಜ್ಞ ಹಾಸನದ ಬಿ.ಎಸ್.ದೇಸಾಯಿ ಹೇಳಿದರು.
ನಾವು ಪ್ರತಿಷ್ಠಾನ ಕೊಡಗು ವತಿಯಿಂದ ಶಾಲಾ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಚನ್ನಬಸಪ್ಪ ಸಭಾಂಗಣದಲ್ಲಿ ನಡೆದ ‘ಹಕ್ಕಿಗೊಂದು ಗುಟುಕು ಅಭಿಯಾನ-2023 ರ ಸಮಾರೋಪ ಸಮಾರಂಭ ಹಾಗೂ ಪಕ್ಷಿ ಛಾಯಾಚಿತ್ರ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಕೃತಿ ಮಾತೆ ಬಳಲಿದ್ದಾಳೆ. ಭೂಮಿಯ ಮೇಲೆ ಮನುಷ್ಯರು ಹಾಗೂ ಇತರ ಜೀವಿಗಳು ಬದುಕಬೇಕು. ದಟ್ಟವಾದ ಕಾಡನ್ನು ಮಾನವನಿಂದ ಸೃಷ್ಟಿಸಲು ಸಾಧ್ಯವಿಲ್ಲ. ಅಂತಹ ಕಾಡನ್ನು ಮನುಷ್ಯರು ನುಗ್ಗಿ ಅರಣ್ಯ ನಾಶ ಮಾಡಲು ಬೀಡಬಾರದು ಎಂದು ಹೇಳಿದರು.
ಪ್ರಕೃತಿನಾಶ, ಭೂಮಿಯೊಳಗಿನ ಒತ್ತಡದಿಂದ ಪ್ರಕೃತಿವಿಕೋಪಗಳು, ಹವಮಾನ ವೈಪರಿತ್ಯ ಸಂಭವಿಸುತ್ತಿದೆ. ಮುಂದೆ ಗಂಡಾಂತರದ ಮುನ್ಸೂಚನೆ ಇದೆ. ಈ ಕಾರಣದಿಂದಲಾದರೂ ಪ್ರತಿದಿನ ಪರಿಸರ ಉಳಿಯುವ ಕಾಯಕ ಮಾಡಲೇಬೇಕಾಗಿದೆ ಎಂದರು.
ಪ್ರಾಣಿ ಮತ್ತು ಪಕ್ಷಿ ಸಂಕುಲಗಳು ಪ್ರಕೃತಿಯ ಅವಿಭಾಜ್ಯ ಅಂಗಗಳು. ಅವುಗಳು ಉಳಿದರೆ ಮಾತ್ರ ಮನುಷ್ಯ ಉಳಿಯಲು ಸಾಧ್ಯ. ಪ್ರಾಣಿ, ಪಕ್ಷಿ, ಕೀಟಗಳು ಮನುಷ್ಯನ ಬದುಕಿಗೆ ಜೀವನಾಧಾರವಾಗಿವೆ. ಅಂತಹ ಪಕ್ಷಿಗಳನ್ನು ಬೇಸಿಗೆಯಲ್ಲಿ ರಕ್ಷಣೆ ಮಾಡಬೇಕಾದ ಜವಾಬ್ದಾರಿಯೂ ನಮ್ಮ ಮೇಲಿದೆ. ನಾವು ಪ್ರತಿಷ್ಠಾನದ ಹಕ್ಕಿಗೊಂದು ಗುಟುಕು ಅಭಿಯಾನ ಅತ್ಯಂತ ಅರ್ಥಪೂರ್ಣ ಹಾಗೂ ಪ್ರತಿವರ್ಷ ಮಾಡಲೇ ಬೇಕಾದ ಉತ್ತಮ ಕಾರ್ಯ ಎಂದರು.
ಹಕ್ಕಿಗೊಂದು ಗುಟುಕು ಅಭಿಯಾನದಲ್ಲಿ ಭಾಗವಹಿಸಿ, ಪಕ್ಷಿಗಳಿಗೆ ನೀರು, ಆಹಾರ ಇಟ್ಟು ಸೆಲ್ಫಿ ಕಳುಹಿಸುವ ಸ್ಫರ್ಧೆಯಲ್ಲಿ ಭಾಗವಹಿಸಿದ್ದ ವಿರಾಜಪೇಟೆ ಕಾವೇರಿ ಶಾಲೆಯ ಕ್ಷಮಾ ಕಾವೇರಮ್ಮ ಪ್ರಥಮ, ವಿರಾಜಪೇಟೆಯ ಉತ್ತಂಡ ಪೂಜಾ ಜಗತ್ ದ್ವಿತೀಯ, ಮಂಗಳೂರು ಸೂರತ್ಕಲ್‍ನ ಶ್ರೇಯಾಂಕ್ ಜೈನ್ ತೃತೀಯ, ಆಲೂರು ಸಿದ್ದಾಪುರದ ಡಾ.ಸುಪರ್ಣಾ ನಾಲ್ಕನೆ ಸ್ಥಾನ ಪಡೆದರು.
ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿ ಅಧಿಕ ಅಂಕ ಗಳಿಸಿದ ಬುಡಕಟ್ಟು ಸಮುದಾಯ ಮತ್ತು ಬಡವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸಲಾಯಿತು. ಬಿ.ಕೆ.ಪೂಜಾಶ್ರೀ, ಕೆ.ಆರ್.ಭಾರತಿ, ಎ.ಜಿ. ಶಾಲಿನಿ ಅವರುಗಳಿಗೆ ಪ್ರತಿಷ್ಠಾನದ ಮೂಲಕ ಪ್ರೋತ್ಸಾಹಧನ ವಿತರಿಸಲಾಯಿತು. ಪ್ರತಿಷ್ಠಾನದಿಂದ ವರ್ಷದ ಜೋಡಿ ಹಕ್ಕಿಗಳಾಗಿ ಆಯ್ಕೆಯಾದ ತಾಕೇರಿ ಗ್ರಾಮದ ಡಿ.ಟಿ.ನಿರಂಜನ್, ಚಾಂದಿನಿ ದಂಪತಿಗಳನ್ನು ಸನ್ಮಾನಿಸಲಾಯಿತು.
ವಿವಿಧ ಶಾಲೆಯ ವಿದ್ಯಾರ್ಥಿಗಳು ಆಗಮಿಸಿ ಪಕ್ಷಿಗಳ ಛಾಯಚಿತ್ರಗಳನ್ನು ವೀಕ್ಷಿಸಿದರು. ಕಾರ್ಯಕ್ರಮದಲ್ಲಿ ವಕೀಲ ಬಿ.ಜೆ.ದೀಪಕ್, ಉದ್ಯಮಿ ಅರುಣ್ ಕೊತ್ತನಳ್ಳಿ, ಬೆಂಗಳೂರು ಮಲೆನಾಡು ಸಂಘದ ನಿರ್ದೇಶಕ ರಂಜನ್‍ಗೌಡ, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಎಚ್.ರಮೇಶ್, ಕಾವೇರಿ ಗ್ರಾಮೀಣ ಬ್ಯಾಂಕ್‍ನ ವ್ಯವಸ್ಥಾಪಕ ಎಂ.ಬಿ.ಪ್ರದೀಪ್. ನಾವು ಪ್ರತಿಷ್ಠಾನ ಸಂಸ್ಥಾಪಕರಾದ ಗೌತಮ್ ಕಿರಗಂದೂರು ಮತ್ತು ಸುಮನಾ ಗೌತಮ್ ಪ್ರಮುಖರಾದ ರಕ್ಷಿತ್ ಮಲ್ನಾಡ್ ಇದ್ದರು.








