ಮಡಿಕೇರಿ ಜೂ.21 : ಕುಶಾಲನಗರ ಪಟ್ಟಣ ಪೊಲೀಸ್ ಠಾಣೆ ಸರಹದ್ದಿನಲ್ಲಿ ಅಕ್ರಮವಾಗಿ ಮಾದಕ ವಸ್ತುಗಳನ್ನು ಮಾರಾಟ ಮಾಡುತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಸೋಮವಾರಪೇಟೆ ನಿವಾಸಿ ಅಶ್ರಫ್ (40) ಹಾಗೂ ಕೊಟ್ಟಮುಡಿ ನಿವಾಸಿ ಇಸ್ಮಾಯಿಲ್(31) ಎಂದು ಗುರುತಿಸಲಾಗಿದೆ. ಇವರ ಬಳಿ ಇದ್ದ 19 ಗ್ರಾಂ ನಿಷೇಧಿತ ಮಾದಕ ವಸ್ತು (ಎಂಡಿಎಂಎ)ವನ್ನು ವಶಪಡಿಸಿಕೊಳ್ಳಲಾಗಿದೆ.
ಸೋಮವಾರಪೇಟೆ ಉಪ ವಿಭಾಗದ ಡಿವೈಎಸ್ಪಿ ಆರ್.ವಿ.ಗಂಗಾಧರಪ್ಪ, ಕುಶಾಲನಗರ ವೃತ್ತ ನಿರೀಕ್ಷಕ ಮಹೇಶ್.ಬಿ.ಜಿ, ಠಾಣಾಧಿಕಾರಿ ರವೀಂದ್ರ ಹಾಗೂ ಸಿಬ್ಬಂದಿಗಳ ವಿಶೇಷ ತಂಡಕ್ಕೆ ಕುಶಾಲನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿ ಮಾದಕ ವಸ್ತು ಮಾರಾಟ ಮಾಡುತ್ತಿರುವ ಕುರಿತು ದೊರೆತ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಯಿತು.
ಪ್ರಕರಣ ಪತ್ತೆ ಹಚ್ಚಿದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ದಕ್ಷತೆ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.








