ಸುಂಟಿಕೊಪ್ಪ, NEWS DESK ನ.20: ಬಡವರಿಗೆ ವಸತಿ ಸೌಲಭ್ಯವಿಲ್ಲ, ಗಿರಿಜನರಿಗೆ ಆಧಾರ್ ಕಾರ್ಡ್, ಪಡಿತರ ಚೀಟಿ ಹಾಗೂ ವಾಸ ದೃಢೀಕರಣ ಪತ್ರಗಳು ಲಭ್ಯವಾಗುತ್ತಿಲ್ಲ. ಅವೈಜ್ಞಾನಿಕ ಕುಡಿಯುವ ನೀರಿನ ಕಾಮಗಾರಿಯಿಂದಾಗಿ ವಾರಕ್ಕೊಮ್ಮೆ ಮಾತ್ರ ನೀರು ಪೂರೈಕೆಯಾಗುತ್ತಿದೆ. ರಸ್ತೆಗಳು ಗುಂಡಿಮಯವಾಗಿದ್ದು, ಶ್ರೀಮಂತರು ರಸ್ತೆ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿಯ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿಯ 2026-27ನೇ ಸಾಲಿನ ಗ್ರಾಮಸಭೆಯು ಕಾನ್‌ಬೈಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿ ಎಚ್.ಎ. ಮೋಹನ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಹೆರೂರು ಗ್ರಾಮದಲ್ಲಿ ಗಿರಿಜನರೇ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ. 2000ನೇ ಇಸವಿಯಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳ ಹೆಸರಿನಲ್ಲಿ 2.40 ಎಕರೆ ಜಾಗವನ್ನು ವಸತಿ ರಹಿತರಿಗೆ ಮೀಸಲಿಡಲಾಗಿತ್ತು. ಈ ಸಂದರ್ಭದಲ್ಲಿ ಹಲವರಿಗೆ ಕಂದಾಯ ಇಲಾಖೆಯಿಂದ ಹಕ್ಕುಪತ್ರ ನೀಡಲಾಗಿದ್ದು, ಕೆಲವರಿಗೆ ಆದೇಶ ಪತ್ರವೂ ದೊರೆತಿದೆ. ಆದರೆ, ಪ್ರಸ್ತುತ ಕೇವಲ 28 ಮಂದಿಗೆ ಮಾತ್ರ ಹಕ್ಕುಪತ್ರ ವಿತರಿಸಲಾಗಿದೆ. ಜಾಗದ ಗುರುತಿಸುವಿಕೆಯಲ್ಲಿನ ಗೊಂದಲದಿಂದಾಗಿ ಉಳಿದವರಿಗೆ ನಿವೇಶನದ ಹಕ್ಕುಪತ್ರ ದೊರೆತಿಲ್ಲ. ಈ ನಡುವೆ ಹಲವರು ಗ್ರಾಮವನ್ನೇ ತೊರೆದಿದ್ದಾರೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಿ ಬಡವರಿಗೆ ನಿವೇಶನದ ಹಕ್ಕುಪತ್ರ ನೀಡಬೇಕು ಎಂದು ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸತೀಶ್, ಮಾಜಿ ಅಧ್ಯಕ್ಷ ರಮೇಶ್, ಕರುಣ ಹಾಗೂ ಮೊಹಮ್ಮದ್ ಆಲಿ ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪಿಡಿಒ ಆಸ್ಮಾ, ಈ ಸಮಸ್ಯೆಯನ್ನು ಸರ್ಕಾರದ ಮಟ್ಟದಲ್ಲಿ ಪರಿಹರಿಸಬೇಕಿದೆ. ತಾಲೂಕು ಪಂಚಾಯಿತಿ ಇಒ, ತಹಶೀಲ್ದಾರ್ ಹಾಗೂ ಶಾಸಕರ ಗಮನಕ್ಕೆ ತಂದು ಗ್ರಾಮದಲ್ಲಿ ವಿಶೇಷ ಸಭೆ ಕರೆದು ಸಮಸ್ಯೆಯನ್ನು ಇತ್ಯರ್ಥಪಡಿಸಲಾಗುವುದು ಎಂದು ತಿಳಿಸಿದರು. ನೋಡಲ್ ಅಧಿಕಾರಿ ರಾಕೇಶ್ ಕೂಡ ಇದಕ್ಕೆ ಸಮ್ಮತಿ ಸೂಚಿಸಿದರು.
ನಾಕೂರು ಶಿರಂಗಾಲ ಗ್ರಾಮದ 2ನೇ ವಾರ್ಡ್‌ನಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು, ವಾರಕ್ಕೊಮ್ಮೆ ಮಾತ್ರ ನೀರು ಪೂರೈಕೆಯಾಗುತ್ತಿದೆ. ಗಿರಿಜನ ಕಾಲೋನಿಗೆ ಸಮರ್ಪಕವಾಗಿ ನೀರು ದೊರೆಯುತ್ತಿಲ್ಲ. ನೀರಿನ ಟ್ಯಾಂಕ್ ನಿರ್ಮಿಸಿದ್ದರೂ ಅದಕ್ಕೆ ನೀರು ತುಂಬಿಸಲಾಗಿಲ್ಲ. ಗಿರಿಜನರು ಕೆಲವೊಮ್ಮೆ ಟ್ಯಾಂಕ್‌ನ ನೆಲಭಾಗದಲ್ಲೇ ಮಲಗುವ ಪರಿಸ್ಥಿತಿ ಎದುರಾಗಿದೆ. ಇದರಿಂದ ಅನಾಹುತ ಸಂಭವಿಸಿದರೆ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳೇ ಹೊಣೆ ಎಂದು ರ‍್ಣ ಹಾಗೂ ಅಭಿಲಾಷ್ ಆತಂಕ ವ್ಯಕ್ತಪಡಿಸಿದರು.
ಕಳೆದ ಮೂರು ತಿಂಗಳಿಂದ ವೃದ್ಧಾಪ್ಯ ವೇತನ, ವಿಧವಾ ವೇತನ ಹಾಗೂ ವಿಕಲಚೇತನರ ಮಾಸಾಶನ ಬಿಡುಗಡೆಯಾಗಿಲ್ಲ. ಆಹಾರ ಇಲಾಖೆಯು ಹಲವು ಬಿಪಿಎಲ್ ಕಾರ್ಡುದಾರರ ಪಡಿತರ ಚೀಟಿಗಳನ್ನು ರದ್ದುಗೊಳಿಸಿದೆ ಎಂದು ಸತೀಶ್ ಸಭೆಯ ಗಮನಕ್ಕೆ ತಂದರು.
ಗ್ರಾಮಸಭೆಗಳನ್ನು ನಡೆಸಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಗ್ರಾಮಸ್ಥರು ಸಭೆಗೆ ಬಂದು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಹೋಗುವುದಷ್ಟೇ ಆಗುತ್ತಿದೆ. ಗ್ರಾಮ ಪಂಚಾಯಿತಿಗೆ ಸರ್ಕಾರದಿಂದ ಸಮರ್ಪಕವಾಗಿ ಅನುದಾನ ಬಿಡುಗಡೆಯಾಗುತ್ತಿಲ್ಲ. ಮನೆಗಳ ಮುಂದೆ ರಸ್ತೆಗಳನ್ನು ಅಗೆದು ಹಾಳು ಮಾಡಲಾಗುತ್ತಿದೆ ಎಂದು ರಾಮಪ್ಪ ಅಸಮಾಧಾನ ವ್ಯಕ್ತಪಡಿಸಿದರು.
ಸಭೆಯಲ್ಲಿ ಆಹಾರ ಇಲಾಖೆಯ ಅಧಿಕಾರಿ ಸ್ವಾತಿ, ಆರೋಗ್ಯ ಇಲಾಖೆಯ ಉಷಾ, ಕಾಫಿ ಮಂಡಳಿಯ ಅಧಿಕಾರಿ ಉಪೇಂದ್ರ ಕುಮಾರ್, ವಸತಿ ಇಲಾಖೆಯ ಭಾನುಪ್ರಕಾಶ್, ಕೃಷಿ ಇಲಾಖೆಯ ಸುರ‍್ಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಸಾವಿತ್ರಿ, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕರ‍್ತನ್, ಸಮಾಜ ಕಲ್ಯಾಣ ಇಲಾಖೆಯ ರವಿ, ಕಂದಾಯ ಇಲಾಖೆಯ ಗ್ರಾಮ ಆಡಳಿತಾಧಿಕಾರಿ ನಸ್ಸೀಮ ಹಾಗೂ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಚಂದ್ರಶೇಖರ್ ಉಪಸ್ಥಿತರಿದ್ದರು.
















