ನಾಪೋಕ್ಲು ಜೂ.22 : ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಪ್ರೌಢಶಾಲಾ ವಿಭಾಗದ ಪೊಲೀಸ್ ಘಟಕ, ರಾಷ್ಟ್ರೀಯ ಸೇವಾ ಯೋಜನೆ, ರೋಟರಿ ಇಂಟರಾಕ್ಟ್ ಕ್ಲಬ್ ಸಂಯುಕ್ತಾಶ್ರಯದಲ್ಲಿ ನಾಪೋಕ್ಲು ಗ್ರಾ.ಪಂ, ಆರೋಗ್ಯ ಇಲಾಖೆ, ಪೋಲಿಸ್ ಇಲಾಖೆ, ಶೌರ್ಯ ವಿಪತ್ತು ತಂಡ, ಶ್ರೀ ಮಕ್ಕಿ ಶಾಸ್ತಾವು ಸೇವಾ ಕಾರ್ಯಪಡೆ ಇದರ ಸಯೋಗದೊಂದಿಗೆ 9ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಶಾಲೆಯ ಆವರಣದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ “ವಸುದೈವ ಕುಟುಂಬಕ್ಕಾಗಿ ಯೋಗ ಅರ್ ಆಂಗನ್ ಯೋಗ ” ಎಂಬ ಘೋಷ ವಾಕ್ಯದ ಪೋಸ್ಟರ್ ಬಿಡುಗಡೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಶಾಲೆಯ ಆಡಳಿ ಮಂಡಳಿ ಉಪಾಧ್ಯಕ್ಷ ಕೆ.ಎ. ಹ್ಯಾರಿಸ್ ಮನುಷ್ಯನ ದೈಹಿಕ ಮತ್ತು ಮಾನಸಿಕ ಸದೃಢ ಬೆಳವಣಿಗೆಗೆ ಯೋಗ ಬಹಳ ಮುಖ್ಯ. ಹಿಂದಿನ ಕಾಲದಲ್ಲಿಯೇ ಯೋಗವನ್ನು ಸಂತರು, ಋಷಿಮುನಿಗಳು ಮಾಡುತ್ತಿದ್ದರು. ಆದರೆ ಇದರ ಬಗ್ಗೆ ಯಾವುದೇ ಪ್ರಚಾರವಾಗುತ್ತಿರಲಿಲ್ಲ, ಯೋಗವನ್ನು ಭಾರತ ಇಂದು ಅಂತಾರಾಷ್ಟ್ರೀಯ ಮಟ್ಟಕ್ಕೆ ತಲುಪಿಸಿ ಕೀರ್ತಿಯನ್ನುಪಡೆದುಕೊಂಡಿದೆ. ಯೋಗ ಒಂದು ದಿನಕ್ಕೆ ಮಾತ್ರ ಸೀಮಿತಗೊಳಿಸದೆ ಪ್ರತಿಯೊಬ್ಬರೂ ದಿನನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ಸಲಹೆ ನೀಡಿದರು.
ಶಾಲೆಯ ಶಿಕ್ಷಕಿ ಹಾಗೂ ಭಾರತ್ ಸ್ಕೌಟ್ಸ್ ಗೈಡ್ಸ್ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಕೆ.ಬಿ.ಉಷಾರಾಣಿ ನೇತೃತ್ವದಲ್ಲಿ ವಿವಿಧ ಯೋಗಾಭ್ಯಾಸ ನಡೆಸಲಾಯಿತು.
ಈ ಸಂದರ್ಭ ಶಾಲೆಯ ಪ್ರಭಾರ ಪ್ರಾಂಶುಪಾಲ ಡಾ. ಅವನಿಜ ಸೋಮಯ್ಯ, ಪ್ರಭಾರ ಉಪ ಪ್ರಾಂಶುಪಾಲ ಎನ್.ಎಸ್. ಶಿವಣ್ಣ, ಶಾಲಾ ಆಡಳಿತ ಮಂಡಳಿ ಸದಸ್ಯರು, ಮಡಿಕೇರಿ ಪತಂಜಲಿ ಸಂಸ್ಥೆಯ ಲಿಂಗಪ್ಪ, ಶಾಲೆಯ ಉಪನ್ಯಾಸಕ ಮತ್ತು ಶಿಕ್ಷಕ ವೃಂದ, ವಿವಿಧ ಇಲಾಖೆಯ, ಸಂಘ ಸಂಸ್ಥೆಯ ಪದಾಧಿಕಾರಿಗಳು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ವರದಿ :ಝಕರಿಯ ನಾಪೋಕ್ಲು








