ಮಡಿಕೇರಿ ಜೂ.22 : ಚೆಟ್ಟಳ್ಳಿ ಸಮೀಪದ ಕಂಡಕರೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ದೈಹಿಕ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಹೆಚ್.ದಿನಕರ್ ಶೆಟ್ಟಿ ಅವರು, ಮಡಿಕೇರಿ ತಾಲ್ಲೂಕಿನ ಚೆಂಬು ಶಾಲೆಗೆ ವರ್ಗಾವಣೆಗೊಂಡಿದ್ದು, ಅವರನ್ನು ಕಂಡಕರೆಯ ಗಾಂಧಿ ಯುವಕ ಸಂಘದಿಂದ ಸನ್ಮಾನಿಸಿ ಬೀಳ್ಕೊಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ಮಾತನಾಡಿದ ಗಾಂಧಿ ಯುವಕ ಸಂಘದ ಅಧ್ಯಕ್ಷ, ಪತ್ರಕರ್ತ ಇಸ್ಮಾಯಿಲ್ ಕಂಡಕರೆ, ದಿನಕರ್ ಶೆಟ್ಟಿ ಅವರು ಕಳೆದ ನಾಲ್ಕು ವರ್ಷಗಳಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಕಂಡಕರೆ ಶಾಲೆಯನ್ನು ಅಭಿವೃದ್ಧಿಯತ್ತ ಕೊಂಡೊಯ್ದಿದ್ದಾರೆ.
ಸಹ ಶಿಕ್ಷಕರ ಸಹಕಾರದೊಂದಿಗೆ ಶಾಲೆಯ ಆವರಣದಲ್ಲಿ ಉತ್ತಮವಾದ ಪರಿಸರವನ್ನು ನಿರ್ಮಾಣ ಮಾಡಿದ್ದಾರೆ. ಇವರ ಮುಂದಿನ ಭವಿಷ್ಯ ಉಜ್ವಲವಾಗಲೆಂದು ಶುಭಹಾರೈಸಿದರು.
ಶಿಕ್ಷಣ ಇಲಾಖೆ ಕಂಡಕರೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕೂಡಲೇ ದೈಹಿಕ ಶಿಕ್ಷಕರನ್ನು ನೇಮಕ ಮಾಡಬೇಕೆಂದು ಇಸ್ಮಾಯಿಲ್ ಒತ್ತಾಯಿಸಿದರು.
ಬೀಳ್ಕೊಡುಗೆ ಸನ್ಮಾನ ಸ್ವೀಕರಿಸಿ ಮಾತನಾಡಿದ ದೈಹಿಕ ಶಿಕ್ಷಕ ದಿನಕರ್ ಶೆಟ್ಟಿ , ಕಳೆದ ನಾಲ್ಕು ವರ್ಷಗಳ ಕಾಲ ಕಂಡಕರೆ ಶಾಲೆಯಲ್ಲಿ ಕೆಲಸ ಮಾಡಿರುವುದಕ್ಕೆ ಆತ್ಮತೃಪ್ತಿ ಇದೆ. ಊರಿನವರು ಎಲ್ಲಾ ರೀತಿಯ ಸಹಕಾರ ನೀಡಿದ್ದಾರೆ. ಶಾಲೆಯಲ್ಲಿ ಯಾವುದೇ ವಿಷಯಗಳು ಇದ್ದರೆ ಕಂಡಕರೆಯ ಗಾಂಧಿ ಯುವಕ ಸಂಘದವರು ತಕ್ಷಣ ಸ್ಪಂದಿಸುತ್ತಿದ್ದರು ಎಂದು ಹೇಳಿದರು.
ಈ ಸಂದರ್ಭ ಶಾಲಾ ಮುಖ್ಯೋಪಾಧ್ಯಾಯ ಎಂ.ಪಿ.ಧನುಪ್ರಕಾಶ್, ಸಹ ಶಿಕ್ಷಕರಾದ ಟಿ.ಎನ್.ರತೀಶ್, ಟಿ.ಪಿ.ಜನಿತ
ಗಾಂಧಿ ಯುವಕ ಸಂಘದ ಉಪಾಧ್ಯಕ್ಷ ಸವಾದ್ ಉಸ್ಮಾನ್, ಕಾರ್ಯದರ್ಶಿ ಕೆ.ಎಂ.ಉನೈಸ್ ಹಾಗೂ ಶಾಲಾ ವಿದ್ಯಾರ್ಥಿಗಳು ಹಾಜರಿದ್ದರು.









