ವಿರಾಜಪೇಟೆ ಜೂ.22 : ವಿರಾಜಪೇಟೆ ತಾಲ್ಲೂಕಿನ ಕಾರ್ಯನಿರತ ಪತ್ರಕರ್ತರ ಸಂಘದ 2022ನೇ ಸಾಲಿನ ವಾರ್ಷಿಕ ಪ್ರಶಸ್ತಿಯನ್ನು ಪ್ರಕಟಿಸಲಾಗಿದ್ದು, ಐವರು ಪತ್ರಕರ್ತರು ಪ್ರಶಸ್ತಿಗೆ ಭಾಜನರಾಗಿದ್ದಾರೆ.
ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್ ಪೊನ್ನಣ್ಣ ಅವರು ತಮ್ಮ ತಂದೆ ದಿವಂಗತ ಎ.ಕೆ ಸುಬ್ಬಯ್ಯ ಹಾಗೂ ತಾಯಿ ದಿವಂಗತ ಎ.ಎಸ್ ಪೊನ್ನಮ್ಮ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಕ್ರೀಡಾ ವರದಿಗೆ ಶಕ್ತಿ ಪತ್ರಿಕೆಯಲ್ಲಿ ಪ್ರಕಟವಾದ “ಮಾಲ್ದಾರೆ ಶಾಲಾ ಮಕ್ಕಳಿಗಿಲ್ಲ ಆಟದ ಮೈದಾನ” ವರದಿಗೆ ಎ.ಎನ್ ವಾಸು ಪಡೆದುಕೊಂಡಿದ್ದಾರೆ.
ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಆರ್ ಸವಿತಾ ರೈ ಅವರು ತಮ್ಮ ತಂದೆ ಕೃಷಿಕರಾಗಿದ್ದ ದಿವಂಗತ ಬಿ.ಎಸ್ ರಂಗನಾಥ ರೈ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಕೃಷಿ ವರದಿಗೆ ವಿಜಯಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ “ಪ್ರಯೋಗಶೀಲ ಕೃಷಿಕ ಬಿ.ಎಸ್ ನಾರಾಯಣ್ ರಾವ್” ವರದಿಗೆ ರಜಿತಾ ಕಾರ್ಯಪ್ಪ ಪಡೆದುಕೊಂಡಿದ್ದಾರೆ.
ಸಿದ್ದಾಪುರದ ಸಮಾಜ ಸೇವಕ ಕೆ.ಯು ಅಬ್ದುಲ್ ಮಜೀದ್ ಅವರು ತಮ್ಮ ತಂದೆ ದಿವಂಗತ ಉಸ್ಮಾನ್ ಹಾಜಿ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಮಾನವೀಯ ವರದಿಗೆ ಶಕ್ತಿ ಪತ್ರಿಕೆಯಲ್ಲಿ ಪ್ರಕಟವಾದ “ದಿಗ್ಬಂಧನಕ್ಕೆ ಒಳಗಾಗಿರುವ ಕುಟುಂಬಕ್ಕೆ ಇನ್ನೂ ದೊರೆತಿಲ್ಲ ನ್ಯಾಯ” ವರದಿಗೆ ಪುತ್ತಂ ಪ್ರದೀಪ್ ಪಡೆದುಕೊಂಡಿದ್ದಾರೆ.
ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕ ಕೋಲತಂಡ ರಘು ಮಾಚಯ್ಯ ಅವರು ತಮ್ಮ ತಂದೆ ದಿವಂಗತ ಕೋಲತಂಡ ಉತ್ತಪ್ಪ ಹಾಗೂ ತಾಯಿ ಕಾಮವ್ವ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಅರಣ್ಯ ಮತ್ತು ವನ್ಯಜೀವಿ ವರದಿಗೆ ಕನ್ನಡಪ್ರಭ ಪತ್ರಿಕೆಯಲ್ಲಿ ಪ್ರಕಟವಾದ “ಸಾರ್ವಜನಿಕರಿಗೆ ತಲೆನೋವಾಗಿದ್ದ ಪುಂಡಾನೆ ಸೆರೆ” ವರದಿಗೆ ಆರ್. ಸುಬ್ರಮಣಿ ಪಡೆದುಕೊಂಡಿದ್ದಾರೆ.
ವಿರಾಜಪೇಟೆಯ ಪ್ರಗತಿ ಶಾಲೆಯ ವ್ಯವಸ್ಥಾಪಕ ಮಾದಂಡ ತಿಮ್ಮಯ್ಯ ಅವರು ತಮ್ಮ ತಾಯಿ ದಿವಂಗತ ತುಂಗಾ ಪೂವಯ್ಯ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯತ್ತಮ ಶೈಕ್ಷಣಿಕ ವರದಿಗೆ ಆಂದೋಲನ ಪತ್ರಿಕೆಯಲ್ಲಿ ಪ್ರಕಟವಾದ “ಶಿಕ್ಷಣದಿಂದ ದೂರು ಉಳಿದ ವಲಸೆ ಕಾರ್ಮಿಕರ ಮಕ್ಕಳು” ವರದಿಗೆ ಎಂ.ಎ ಕೃಷ್ಣ ಪಡೆದುಕೊಂಡಿದ್ದಾರೆ.
ವಿರಾಜಪೇಟೆ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರೆಜಿತ್ ಕುಮಾರ್ ಗುಹ್ಯ ಅವರ ಅಧ್ಯಕ್ಷತೆಯಲ್ಲಿ ಜು.2 ರಂದು ನಡೆಯುವ ಸಂಘದ ವಾರ್ಷಿಕ ಮಹಾಸಭೆಯ ದಿನದಂದು ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು, ಪ್ರಶಸ್ತಿ ಪಡೆದ ಎಲ್ಲಾ ಪತ್ರಕರ್ತ ಮಿತ್ರರಿಗೆ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ ಅಭಿನಂದನೆ ಸಲ್ಲಿಸುತ್ತದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಎ.ಎಸ್ ಮುಸ್ತಫ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.









