ಮಡಿಕೇರಿ ಜೂ.22 : ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕೊಡಗು ಜಿಲ್ಲಾ ಸಂಸ್ಥೆ, ಕರ್ನಾಟಕ ಸರಕಾರ ಕಾರಾಗೃಹ ಮತ್ತು ಸುಧಾರಣಾ ಸೇವೆ ಜಿಲ್ಲಾ ಕಾರಾಗೃಹ ಮಡಿಕೇರಿ ಹಾಗೂ ಮಡಿಕೇರಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವ ವಿದ್ಯಾಲಯದ ಸಹಯೋಗದೊಂದಿಗೆ “ವಸುಧೈವ ಕುಟುಂಬಕ್ಕಾಗಿ ಯೋಗ” ಎಂಬ ಧ್ಯೇಯ ವಾಕ್ಯದೊಂದಿಗೆ 9ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಮಡಿಕೇರಿಯ ಕಾರಾಗೃಹ ಬಂದಿ ನಿವಾಸಿಗಳೊಂದಿಗೆ ಯೋಗ ದಿನವನ್ನು ಆಚರಿಸಲಾಯಿತು.
ಸ್ಕೌಟ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆಯ ಪ್ರಧಾನ ಆಯುಕ್ತ ಕೆ.ಟಿ.ಬೇಬಿ ಮ್ಯಾಥ್ಯೂ ಮಾನಾಡಿ, ಯೋಗ ಎಲ್ಲರ ಮನಸ್ಸನ್ನು ಕೇಂದ್ರೀಕರಿಸುತ್ತದೆ ಮತ್ತು ನಮ್ಮ ಮನಸ್ಸನ್ನು ಪರಿವರ್ತಿಸುತ್ತದೆ ಇದನ್ನು ತಮ್ಮ ದಿನ ನಿತ್ಯದ ಬದುಕಿನಲ್ಲಿ ಅಳವಡಿಸಿಕೊಂಡರೆ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬದಲಾಗಬಹುದು ಎಂದು ಸಲಹೆ ನೀಡಿದರು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾನಾಡಿದ ಜಿಲ್ಲಾ ಕಾರಾಗೃಹದ ಅಧೀಕ್ಷಕ ಸಂಜಯ್ ಜಿತ್ತಿ, ಯಾವುದೋ ಕಾರಣಕ್ಕಾಗಿ ಅಪರಾಧ ಮಾಡಿ ಕೈದಿಗಳಾಗಿ ಬಂಧಿಯಾಗಿದ್ದು, ನಮ್ಮ ಮನಸ್ಸು, ಬುದ್ದಿಯನ್ನು ಹತೋಟಿಯಲ್ಲಿಡಲು ಯೋಗ ಮತ್ತು ಧ್ಯಾನ ಅತ್ಯಂತ ಸಹಕಾರಿ. ಆದ್ದರಿಂದ ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಂಡರೇ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ತಮ್ಮನ್ನು ತಾವು ಗುರುತಿಕೊಳ್ಳಲು ಸಹಕಾರಿಯಾಗಲಿದೆ ಎಂದು ಹಿತನುಡಿದರು.
ಬ್ರಹ್ಮಕುಮಾರಿ ಧನಲಕ್ಷ್ಮಿ ಮಾನಾಡಿ, ಯೋಗ ಮಾಡುವುದರಿಂದ ನಮ್ಮ ಶಾರೀರಿಕವಾಗಿ ಬಾಹ್ಯ ಸಮಸ್ಯೆಗಳು ಬಾರದಂತೆ ನೋಡಿಕೊಳ್ಳಬಹುದು. ನಮ್ಮ ಭಾರತ ದೇಶದಲ್ಲಿ ಅತೀ ಹೆಚ್ಚು ಕಾಲ ಬದುಕಿದ ಪದ್ಮಶ್ರೀ ಪ್ರಶಸ್ತಿ ವಿಜೇತರಾದ ಶಿವಾನಂದ ಯೋಗಿ ಅವರು ಬರೋಬರಿ 125 ವರ್ಷ ಬದುಕಿದ್ದರು ಇವರು ಪ್ರತಿದಿನ ತಪ್ಪದೆ ಯೋಗ ಮಾಡುತಿದ್ದರು ಎಂದರು.
ಧ್ಯಾನವು ನಮ್ಮ ಆಂತರಿಕ ಮನಸ್ಸನ್ನು ಶುದ್ದಿಗೊಳಿಸಿ ನಮ್ಮ ಮನಸ್ಸಿಗೆ ಬರುವ ಕೆಟ್ಟ ಯೋಚನೆಗಳನ್ನು ದೂರ ಮಾಡಿ ಒಳ್ಳೆಯ ಚಿಂತನೆಗಳಿಂದ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಅರ್ಜುನ ಪ್ರಶಸ್ತಿ ವಿಜೇತೆ ಯೋಗ ತರಬೇತುದಾರೆ ಪಿ. ಹೆಚ್. ಅಲೀಮಾ ಮಾತನಾಡಿ, ಯೋಗ ಮಾಡುವುದರಿಂದ ನಮ್ಮ ಆಯಸ್ಸು ಮತ್ತು ಆರೋಗ್ಯವನ್ನು ಹೆಚ್ಚಿಸಿಕೊಳ್ಳಬಹುದು ಮತ್ತು ಪ್ರತಿದಿನ ಎದ್ದ ಕೂಡಲೆ ಯೋಗಾಭ್ಯಾಸ ಮಾಡುವುದರಿಂದ ಸಹಜವಾಗಿ ಬರುವ ದೇಹದ ಸಮಸ್ಯೆಗಳಾದ ಮಂಡಿನೋವು, ಬೆನ್ನುನೋವು, ಕೈ ಕಾಲುಗಳ ಸ್ನಾಯು ಸೆಳೆತ ಇತ್ಯಾದಿಗಳನ್ನು ಹೋಗಲಾಡಿಸಬಹುದು ಎಂದು ಹೇಳುವುದರೊಂದಿಗೆ ಕೆಲವೊಂದು ಸರಳ ಆಸನಗಳನ್ನು ಕೈದಿಗಳೀಗೂ ಮಾಡಿಸಿ ತರಬೇತಿ ನೀಡಿದರು.
ಕಾರ್ಯಕ್ರಮದಲ್ಲಿ ಸ್ಕೌಟ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆಯ ಕಾರ್ಯದರ್ಶಿ ಎಂ. ಎಂ. ವಸಂತಿ, ಸಹ ಕಾರ್ಯದರ್ಶಿ ಬೊಳ್ಳಜಿರ. ಬಿ.ಅಯ್ಯಪ್ಪ, ಸ್ಥಳೀಯ ಸಂಸ್ಥೆಯ ಉಪಾಧ್ಯಕ್ಷರಾದ ಎನ್.ವಿ. ನೀಲಮ್ಮ, ಕಾರ್ಯದರ್ಶಿ ಅಜ್ಜಮಕ್ಕಡ ವಿನುಕುಮಾರ್ , ಜಿಲ್ಲಾ ಕಾರಾಗೃಹದ ಜೈಲರ್ ರವಿ ಮುತ್ತಪ್ಪ ಬಂಡಿವಡ್ಡರ್, ಸಹಾಯಕ ಜೈಲರ್ ಹೆಚ್. ಟಿ. ಲತಾ, ಬ್ರಹ್ಮಕುಮಾರಿ ಬಿ.ಕೆ.ಹರಿಣಾಕ್ಷಿ ಹಾಜರಿದ್ದರು.
ಕಾರ್ಯಕ್ರಮವನ್ನು ಕಾರಾಗೃಹದ ವಾರ್ಡರ್ ಮಹಾಂತೇಶ್ ಪರವಗೋಳ್ ಅವರು ನಿರೂಪಿಸಿದರೆ, ಸ್ಕೌಟ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆಯ ಜಿಲ್ಲಾ ಸಂಘಟಕರಾದ ಯು.ಸಿ. ದಮಯಂತಿ ವಂದಿಸಿದರು.








