ಕುಶಾಲನಗರ ಜೂ.22: ಜಿಲ್ಲೆಯಲ್ಲಿ ಡೆಂಗ್ಯೂ ಜ್ವರದ ಬಗ್ಗೆ ಜನರಲ್ಲಿ ಭೀತಿ ಹೆಚ್ಚಾಗುತ್ತಿರುವ ಹಿನ್ನೆಲೆ ಡೆಂಗ್ಯೂ ಜ್ವರ ಹರಡದಂತೆ ಅಗತ್ಯ ಕ್ರಮಗಳನ್ನು ವಹಿಸುವ ಬಗ್ಗೆ ಕೂಡುಮಂಗಳೂರು ಗ್ರಾ.ಪಂ ನ ಸಾಮಾನ್ಯ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಕೂಡುಮಂಗಳೂರು ಗ್ರಾ.ಪಂ ಅಧ್ಯಕ್ಷರಾದ ಇಂದಿರಾ ರಮೇಶ್ ಅಧ್ಯಕ್ಷತೆಯಲ್ಲಿ ನಡೆದ ಸಮಾನ್ಯ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು. ಈಗಾಗಲೇ ಶುಂಠಿಕೊಪ್ಪ ಹಾಗೂ ಇನ್ನಿತರ ಕಡೆಗಳಲ್ಲಿ ಡೆಂಗ್ಯೂ ಹಾವಳಿ ಹೆಚ್ಚಾಗುತ್ತಿದೆ. ಆದ್ದರಿಂದ ಡೆಂಗ್ಯೂ ಬಗ್ಗೆ ಸಾರ್ವಜನಿಕರಿಗೆ ಅರವು ಮೂಡಿಸುವುದರ ಜೊತೆಗೆ ಗ್ರಾ.ಪಂ ನ ಎಲ್ಲಾ ವಾರ್ಡ್ ನಲ್ಲಿಯೂ ರಾಸಾಯನಿಕ ಹೊಗೆಯನ್ನು ಸಿಂಪಡಿಸುವ ಬಗ್ಗೆ ನಿರ್ಧರಿಸಲಾಯಿತು. ಅಲ್ಲದೇ ಚರಂಡಿಗಳಲ್ಲಿ ಬ್ಲೀಚಿಂಗ್ ಹಾಕುವುದರ ಜೊತೆಗೆ ಸ್ಬಚ್ಚತೆಗೆ ಹೆಚ್ಚಿನ ಆದ್ಯತೆ ನೀಡುವ ಬಗ್ಗೆ ಒತ್ತಾಯಿಸಲಾಯಿತು. ಚರಂಡಿ ಸ್ವಚ್ಚತೆಗೊಳಿಸಿ ತ್ಯಾಜ್ಯವನ್ನು ರಸ್ತೆ ಬದಿಯಲ್ಲಿ ಹಾಕಲಾಗುತ್ತಿದೆ. ತ್ಯಾಜ್ಯವನ್ನು ದಿನಗಟ್ಟಲೇ ರಸ್ತೆಯಲ್ಲಿಯೇ ಬಿಡದೇ ಆದಷ್ಟು ಬೇಗನೇ ಅದನ್ನು ವಿಲೇವಾರಿ ಮಾಡಬೇಕಾಗಿದೆ. ಇಲ್ಲದಿದ್ದಲ್ಲಿ ಕೋಳಿ, ನಾಯಿಗಳು ತ್ಯಾಜ್ಯವನ್ನು ಕೆರೆದು ಚರಂಡಿ ಹಾಕುತ್ತವೆ. ಇದರಿಂದ ಚರಂಡಿ ಸ್ವಚ್ಚಗೊಳಿಸಿದ ಕೆಲಸ ವ್ಯರ್ಥವಾಗಲಿದೆ. ಆದ್ದರಿಂದ ಈ ಬಗ್ಗೆ ಗಮನಹರಿಸುವಂತೆ ಸದಸ್ಯರಾದ ಕೆ.ಬಿ.ಶಂಶುದ್ಧೀನ್ ಅವರು ಆಗ್ರಹಿಸಿದರು. ಇದಕ್ಕೆ ಸದಸ್ಯರಾದ ಗಿರೀಶ್, ದಿನೇಶ್ ಆಶಾರವರು ಧ್ವನಿಗೂಡಿಸಿದರು.
ಪಂಚಾಯಿತಿಯ ಕಸದ ವಾಹನ ಸಮಯಕ್ಕೆ ಸರಿಯಾಗಿ ವಾರ್ಡ್ ಗೆ ಬರುತ್ತಿಲ್ಲ. ಈ ಬಗ್ಗೆ ಕ್ರಮಕೈಗೊಳ್ಳುವಂತೆ ಸದಸ್ಯರಾದ ಗಿರೀಶ್ ಒತ್ತಾಯಿಸಿದರು. ಕಸದ ವಾಹನಗಳನ್ನು ಸಮಯಕ್ಕೆ ಸರಿಯಾಗಿ ಕಳುಹಿಸಿಕೊಡಬೇಕು. ಅದು ಬಿಟ್ಟು ಕಾಟಾಚಾರಕ್ಕೆ ಕೆಲಸ ಮಾಡಬೇಡಿ ಎಂದು ಕೆ.ಬಿ.ಶಂಶುದ್ಧೀನ್ ಅಸಮಾಧಾನ ವ್ಯಕ್ತಪಡಿಸಿದರು.
ಪ.ಜಾತಿ ಹಾಗೂ ಪ.ಪಂ ಜನಾಂಗದವರಿಗೆ ಶೇ.೨೫ ರ ನಿಧಿಯಲ್ಲಿ ನೀಡುವ ಅಂತ್ಯ ಸಂಸ್ಕಾರದ ಹಣವನ್ನು, ಒಂದು ತಿಂಗಳ ಒಳಗಾಗಿ ಅರ್ಜಿ ನೀಡುವವರಿಗೆ ಮಾತ್ರ ಹಣ ನೀಡುವಂತೆ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು. ಸ್ವಚ್ಚತಾ ಸಿಬ್ಬಂದಿಗಳನ್ನು ಆಯಾ ದಿನದಂದು ನಿಗಧಿಪಡಿಸಿದ ವಾರ್ಡ್ ನಲ್ಲಿ ಕೆಲಸ ನಿರ್ವಹಿಸಲು ಬಿಡಬೇಕು. ಅವರನ್ನು ಬೇರೆ ಕೆಲಸಗಳಿಗೆ ಬಳಸದಂತೆ ಸದಸ್ಯೆ ಫಿಲೋಮಿನಾ ಒತ್ತಾಯಿಸಿದರು. ಇದಕ್ಕೆ ಇನ್ನಿತರ ಸದಸ್ಯರು ಧ್ವನಿಗೂಡಿಸಿದರು.
ಕೋಳಿ ಮಾಂಸದ ತ್ಯಾಜ್ಯಗಳನ್ನು ಆನೆಕೆರೆ ಬಳಿ ಎಸೆಯಲಾಗುತ್ತಿದ್ದು, ಇದರಿಂದ ಸ್ಥಳೀಯರಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ ಎಂದು ಸದಸ್ಯ ದಿನೇಶ್ ಆಗ್ರಹಿಸಿದರು. ಕಸ ಎಸೆದವರಿಗೆ ದಂಡ ವಿಧಿಸುವುದಾಗಿ ಪಿಡಿಓ ಸಂತೋಷ್ ಸಭೆಗೆ ತಿಳಿಸಿದರು.
ಮುಂಗಾರು ಮಳೆ ಬೀಳದೇ ನದಿಯಲ್ಲಿ ನೀರಿಲ್ಲ. ಬರದ ಆತಂಕ ಜನರಲ್ಲಿದೆ. ಕೂಡುಮಂಗಳೂರು ಗ್ರಾ.ಪಂ ವ್ಯಾಪ್ತಿಯಲ್ಲಿ ಇನ್ನೂ ಕೂಡ ಸಂಪರ್ಕಕೊಡಲಾಗಿಲ್ಲ. ನೀರಿನ ಸಮಸ್ಯೆ ಉಲ್ಭವವಾಗುವುದಕ್ಕೂ ಮುನ್ನ ಅಗತ್ಯ ಕ್ರಮ ಕೈಗೊಳ್ಳಬೇಕು ಸದಸ್ಯರಾದ ಕೆ.ಬಿ.ಶಂಶುದ್ಧೀನ್ ಅವರು ಪಿಡಿಓ ಬಳಿ ಮನವಿ ಮಾಡಿದರು. ಈಗಾಗಲೇ ಈ ಬಗ್ಗೆ ಶಾಸಕರ ಗಮನಕ್ಕೆ ತರಲಾಗಿದೆ. ಯೋಜನೆ ವಿದ್ಯುತ್ ಸಂಪರ್ಕ ನೀಡಲು ಎರಡು ಟಿ.ಸಿ ನೀಡುತ್ತೇವೆ ಎಂದು ಸಂಬಂಧಿಸಿದ ಇಂಜಿನಿಯರ್ ತಿಳಿಸಿದ್ದಾರೆ. ಆದಷ್ಟು ಬೇಗನೇ ವಿದ್ಯುತ್ ಸಂಪರ್ಕ ಕಲ್ಪಿಸಿ, ಯೋಜನೆಯನ್ನು ಜನಬಳಕೆಗೆ ಉಪಯೋಗಿಸಲಾಗುವುದು ಎಂದರು.
ಪಂಚಾಯಿತಿ ಕಟ್ಟಡ ನಿರ್ಮಾಣಕ್ಕೆ ಜಾಗ ನಿಗಧಿ ಮಾಡುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಈ ಬಗ್ಗೆ ಶಾಸಕರಿಗೆ ಪತ್ರ ಬರೆಯುವಂತೆ ನಿರ್ಧರಿಸಲಾಯಿತು. ಕುಶಾಲನಗರ ತಾಲ್ಲೂಕು ಘೋಷಣೆಯಾಗಿ ವರ್ಷ ಕಳೆದರೂ ಪಂಚಾಯಿತಿ ಕಟ್ಟಡದಲ್ಲಿ ಹಳೆಯ ತಾಲ್ಲೂಕಿನ ಹೆಸರಿದೆ. ಕೂಡಲೇ ಕುಶಾಲನಗರ ತಾಲ್ಲೂಕು ಎಂದು ಬದಲಾಯಿಸಿ ಎಂದು ಸದಸ್ಯರಾದ ಕೆ.ಬಿ.ಶಂಶುದ್ಧೀನ್ ಮನವಿ ಮಾಡಿದರು. ದೂರದೃಷ್ಟಿ ಯೋಜನೆಗೆ ಕಾಮಗಾರಿಗಳ ಪಟ್ಟಿಯನ್ನು ನೀಡುವಂತೆ ಪಿಡಿಓ ಸಂತೋಷ್ ಸಭೆಗೆ ತಿಳಿಸಿದರು. ನಂತರ ಸಾರ್ವಜನಿಕರ ಅರ್ಜಿ ವಿಲೇವಾರಿ ಮಾಡಲಾಯಿತು. ಅಧ್ಯಕ್ಷರ ಅನುಮತಿ ಮೇರೆಗೆ ಇತರೆ ವಿಷಯಗಳ ಬಗ್ಗೆ ಚರ್ಚೆ ನಡೆಯಿತು.
ಈ ಸಂದರ್ಭ ಕೂಡುಮಂಗಳೂರು ಗ್ರಾ.ಪಂ ಉಪಾಧ್ಯಕ್ಷರಾದ ಬಾಸ್ಕರ್ ನಾಯಕ್, ಗ್ರಾ.ಪಂ ಸದಸ್ಯರು ಹಾಗೂ ಪಂಚಾಯಿತಿ ಸಿಬ್ಬಂದಿಗಳು ಇದ್ದರು.









