ಮಡಿಕೇರಿ ಜೂ.23 : ಗೋಣಿಕೊಪ್ಪಲು ಗ್ರಾ.ಪಂ ವ್ಯಾಪ್ತಿಯಲ್ಲಿ ಸುಗಮ ಸಂಚಾರ ವ್ಯವಸ್ಥೆ ಸಲುವಾಗಿ ಪಂಚಾಯಿತಿ ಸದಸ್ಯರ, ಗೋಣಿಕೊಪ್ಪಲು ಚೇಂಬರ್ ಆಫ್ ಕಾಮರ್ಸ್ ಸದಸ್ಯರ ಹಾಗೂ ಪೊಲೀಸ್ ಇಲಾಖೆಯ ಜಂಟಿ ಸಭೆ ನಡೆಯಿತು.
ಗೋಣಿಕೊಪ್ಪಲು ಗ್ರಾ.ಪಂ ಸಭಾಂಗಣದಲ್ಲಿ ಪಂಚಾಯಿತಿ ಅಧ್ಯಕ್ಷೆ ಮನ್ನಕ್ಕಮನೆ ಸೌಮ್ಯ ಬಾಲು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಲವು ವಿಷಯಗಳನ್ನು ಚರ್ಚಿಸಲಾಯಿತು.
ಈ ಸಂದರ್ಭ ಗೋಣಿಕೊಪ್ಪಲು ಸಬ್ ಇನ್ಸ್ ಪೆಕ್ಟರ್ ದೀಕ್ಷಿತ್ ಪ್ರಾಸ್ತಾವಿಕವಾಗಿ ಮಾತನಾಡಿ, ಗೋಣಿಕೊಪ್ಪಲು ನಗರವನ್ನು ಸುಗಮ ಸಂಚಾರ ತರಲು ಬೇಕಾದ ವ್ಯವಸ್ಥೆಗಳ ಕುರಿತು ಮಾಹಿತಿ ನೀಡಿದರು.
ಪ್ರಕರಣ ದಾಖಲಿಸುವುದು ನಮ್ಮ ಉದ್ದೇಶವಲ್ಲ. ಸಂಚಾರ ನಿಯಮ ಪಾಲನೆಯಾಗಬೇಕು. ಚಾಲನೆ ಮಾಡುವಾಗ ಎಚ್ಚರಿಕೆ ವಹಿಸಬೇಕು. ಗೋಣಿಕೊಪ್ಪಲು ನಗರದಲ್ಲಿ ವಾಹನ ನಿಲುಗಡೆ ಸಮಸ್ಯೆ ಸರಿಪಡಿಸುವ ನಿಟ್ಟಿನಲ್ಲಿ ಹಲವಾರು ಫಲಕಗಳನ್ನು ಅಳವಡಿಸಬೇಕು. ವಾಹನವನ್ನು ಸರಿಯಾಗಿ ನಿಲುಗಡೆ ಮಾಡುವ ಸಲುವಾಗಿ ರಸ್ತೆಯಲ್ಲಿ ನಿಲುಗಡೆಗಾಗಿ ಬಣ್ಣ ಬಳಿಯುವ ಕೆಲಸವಾಗಬೇಕು ಎಂದು ಸಭೆಯ ಗಮನಕ್ಕೆ ತಂದರು.
ಅಧ್ಯಕ್ಷೆ ಸೌಮ್ಯ ಬಾಲು ಪಾರ್ಕಿಂಗ್ ವ್ಯವಸ್ಥೆಯಲ್ಲಿ ನಾಲ್ಕು ಚಕ್ರಗಳ ವಾಹನಗಳು ನಿಲ್ಲುವ ಕಡೆಗಳಲ್ಲಿ ತ್ರಿಚಕ್ರ ಮತ್ತು ದ್ವಿಚಕ್ರ ವಾಹನಗಳು ನಿಲುಗಡೆ ಮಾಡುತ್ತಿದ್ದು, ಅವುಗಳನ್ನು ನಿಯಂತ್ರಿಸಬೇಕಿದೆ ಅಲ್ಲದೆ ಅಲ್ಲಲ್ಲಿ ವಾಹನಗಳಲ್ಲಿ ವಸ್ತುಗಳನ್ನು ತುಂಬಿಕೊಂಡು ಪಾರ್ಕಿಂಗ್ ಸ್ಥಳದಲ್ಲಿ ಇಡೀ ದಿನ ನಿಲ್ಲಿಸಿ ವ್ಯಾಪಾರ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ ಎಂದರು.
ಗೋಣಿಕೊಪ್ಪಲು ಚೇಂಬರ್ ಆಫ್ ಕಾಮರ್ಸ್ ನ ಅಧ್ಯಕ್ಷ ಸುನಿಲ್ ಮಾದಪ್ಪ ಮಾತನಾಡಿ, ಸುಗಮ ಸಂಚಾರ ವ್ಯವಸ್ಥೆಗೆ ಚೇಂಬರ್ ಆಫ್ ಕಾಮರ್ಸ್ ನಿಂದ ಎಲ್ಲಾ ರೀತಿಯ ಸಹಕಾರಗಳನ್ನು ನೀಡುವುದಾಗಿ ಸಂಚಾರ ನಿಯಂತ್ರಣಕ್ಕೆ ಬೇಕಾದ ಫಲಕಗಳನ್ನು ಉದ್ಯಮಿಗಳಿಂದ ಪ್ರಾಯೋಜಿಸಲಾಗುವುದು ಎಂದರು.
ಚೇಂಬರ್ ಆಫ್ ಕಾಮರ್ಸ್ ನ ಜಿಲ್ಲಾ ಉಪಾಧ್ಯಕ್ಷ ಎಂ.ಪಿ ಕೇಶವ ಕಾಮತ್ ಮಾತನಾಡಿ, ಮುಖ್ಯರಸ್ತೆಯಿಂದ ಬೈಪಾಸ್ ರಸ್ತೆಗೆ ಮತ್ತು ಪೊನ್ನಂಪೇಟೆ ರಸ್ತೆಯಿಂದ ಮೈಸೂರು ರಸ್ತೆಗೆ ಎರಡು ಸೇತುವೆಗಳನ್ನು ನಿರ್ಮಿಸುವ ಮೂಲಕ ದ್ವಿಚಕ್ರ, ತ್ರಿಚಕ್ರ ಮತ್ತು ನಾಲ್ಕು ಚಕ್ರಗಳ ವಾಹನಕ್ಕೆ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿದಲ್ಲಿ ಮುಖ್ಯ ರಸ್ತೆಯಲ್ಲಿ ಉಂಟಾಗುವ ಸಂಚಾರ ಸಮಸ್ಯೆಯನ್ನು ಪರಿಹರಿಸಬಹುದು. ಈ ನಿಟ್ಟಿನಲ್ಲಿ ಗ್ರಾ.ಪಂ , ಜಿ.ಪಂ ಮತ್ತು ಸರಕಾರದೊಂದಿಗೆ ವ್ಯವಹರಿಸಿ ಎರಡು ಸೇತುವೆಗಳನ್ನು ನಿರ್ಮಿಸುವ ಕುರಿತು ಕ್ರಮವಹಿಸಬೇಕಿದೆ ಎಂದರು.
ಗ್ರಾ.ಪಂ ಸದಸ್ಯ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ನ ಮಾಜಿ ಅಧ್ಯಕ್ಷ ಬಿ.ಎನ್. ಪ್ರಕಾಶ್ ಮಾತನಾಡಿ, ಪಾರ್ಕಿಂಗ್ ವ್ಯವಸ್ಥೆಯಲ್ಲಿ ರಸ್ತೆಗೆ ಬಣ್ಣ ಬಳಿಯುವ ಮೂಲಕ ಸರಿಯಾದ ವಾಹನ ಪಾರ್ಕಿಂಗ್ ವ್ಯವಸ್ಥೆ ಮಾಡಿದ್ದಲ್ಲಿ ಸುಗಮ ಸಂಚಾರಕ್ಕೆ ಅನುಕೂಲವಾಗುತ್ತದೆ ಅಲ್ಲದೆ ಗೋಣಿಕೊಪ್ಪಲು ನಗರಕ್ಕೆ ಸುತ್ತು ಮುತ್ತಲ ಗ್ರಾಮಗಳಿಂದ ತ್ಯಾಜ್ಯ ವಸ್ತುವನ್ನು ತಂದು ಸುರಿಯುವ ಸಮಸ್ಯೆ ಉಂಟಾಗಿದೆ ಅದರ ಬಗ್ಗೆ ಪಂಚಾಯಿತಿ ಮತ್ತು ಪೊಲೀಸ್ ಇಲಾಖೆ ಯೇಸು ದಾಖಲಿಸುವ ಮೂಲಕ ನಿಯಂತ್ರಿಸಬೇಕಿದೆ ಎಂದರು.
ಗೋಣಿಕೊಪ್ಪಲು ಚೇಂಬರ ಕಾಮರ್ಸ್ ಉಪಾಧ್ಯಕ್ಷ ಪೊನ್ನಿಮಾಡ ಸುರೇಶ್, ಪ್ರಭಾಕರ್ ನೆಲ್ಲಿತಾಯ, ಗ್ರಾಮ ಪಂಚಾಯಿತಿಯ ಸದಸ್ಯರಾದ ಕುಲ್ಲಚಂಡ ಪ್ರಮೋದ್ ಗಣಪತಿ, ಶರತ್ ಕಾಂತ್ ಮಾತನಾಡಿದರು.
ಸಭೆಯಲ್ಲಿ ಗ್ರಾ.ಪಂ ಮಾಜಿ ಅಧ್ಯಕ್ಷೆ ಚೈತ್ರ ಚೇತನ್, ಮಾಜಿ ಅಧ್ಯಕ್ಷ ಕೆ.ರಾಜೇಶ್, ಸದಸ್ಯರುಗಳಾದ ರಾಮಕೃಷ್ಣ, ಹಕೀಂ, ಸುಲೇಖ, ಸಪೂರ, ಅಫ್ಸಲ್, ರತಿ ಅಚ್ಚಪ್ಪ, ಮಂಜುಳಾ, ಗೋಣಿಕೊಪ್ಪಲು ಚೇಂಬರ್ ಆಫ್ ಕಾಮರ್ಸ್ ಕೋಶಾಧಿಕಾರಿ ಮನೋಹರ್, ನಿರ್ದೇಶಕ ಪಿ.ಜಿ.ರಾಜಶೇಖರ್, ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಪಿ. ವಿ ಶ್ರೀನಿವಾಸ್ , ಕಾರ್ಯದರ್ಶಿ ಗುರುಶ್ರೀ ಹಾಜರಿದ್ದರು.