ಮಡಿಕೇರಿ ಜೂ.23 : ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ.ಎನ್.ರಾವುಫ್ ಹಾಗೂ ಉಪಾಧ್ಯಕ್ಷ ವಿ.ಜಿ.ಮೋಹನ್ ತಮಗೆ ಅಧ್ಯಕ್ಷ ಸ್ಥಾನ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಎಂ.ಎನ್.ರಾವುಫ್ ಈ ಬಾರಿ ಕಾಂಗ್ರೆಸ್ ಆಡಳಿತ ಅಧಿಕಾರ ಹಂಚಿಕೆಯ ಸಂದರ್ಭ ಯುವ ಸಮೂಹಕ್ಕೆ ಆದ್ಯತೆ ನೀಡಲಿದೆ ಎಂದು ತಿಳಿಸಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಮಡಿಕೇರಿ ಕ್ಷೇತ್ರದಲ್ಲಿ ಪಕ್ಷಕ್ಕೆ ಅತ್ಯಧಿಕ ಮತ ದೊರೆಯಲು ಸಾಕಷ್ಟು ಶ್ರಮಿಸಿದ್ದೇನೆ. ಬಿ.ಕಾಂ ಪದವೀಧರನಾಗಿರುವ ನಾನು ನಗರ ಯುವ ಕಾಂಗ್ರೆಸ್ ಸದಸ್ಯನಾಗಿ, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಸಂಘಟನಾ ಕಾರ್ಯದರ್ಶಿ ಮತ್ತು ಸಾಮಾಜಿಕ ಜಾಲತಾಣದ ಜಿಲ್ಲಾ ಕಾರ್ಯದರ್ಶಿಯಾಗಿಯೂ ಪಕ್ಷಕ್ಕಾಗಿ ದುಡಿದಿದ್ದೇನೆ. ಬೂತ್ ಸಂಖ್ಯೆ 210ರಲ್ಲಿ ಬೂತ್ ಅಧ್ಯಕ್ಷನಾಗಿ ಅತಿ ಹೆಚ್ಚು ಮತಗಳು ಕಾಂಗ್ರೆಸ್ ಗೆ ಬರುವಂತೆ ನೋಡಿಕೊಂಡಿದ್ದೇನೆ. ಪ್ರಸ್ತುತ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಪಕ್ಷ ನಿಷ್ಠೆಯನ್ನು ಪ್ರದರ್ಶಿಸಿದ್ದೇನೆ. ಮಡಿಕೇರಿ ಕ್ಷೇತ್ರದ ಶಾಸಕರು ಯುವ ಸಮೂಹಕ್ಕೆ ಅಧಿಕಾರ ಹಂಚಿಕೆ ಮಾಡುವ ಕುರಿತು ಉತ್ಸಾಹ ಹೊಂದಿದ್ದಾರೆ. ಆದ್ದರಿಂದ ಮೂಡ ಅಧ್ಯಕ್ಷ ಸ್ಥಾನ ನನಗೆ ಸಿಗಲಿದೆ ಎನ್ನುವ ವಿಶ್ವಾಸವಿದೆ. ಈ ಬಗ್ಗೆ ಪಕ್ಷದ ವರಿಷ್ಠರ ಗಮನಕ್ಕೂ ತಂದಿದ್ದೇನೆ ಎಂದು ಎಂ.ಎನ್.ರಾವುಫ್ ಹೇಳಿದ್ದಾರೆ.
ಮತ್ತೊಬ್ಬ ಆಕಾಂಕ್ಷಿ ವಿ.ಜಿ.ಮೋಹನ್ ಕೂಡ ಅಧ್ಯಕ್ಷ ಸ್ಥಾನ ನೀಡಬೇಕೆಂದು ಪಕ್ಷದ ನಾಯಕರ ಬಳಿ ಮನವಿ ಮಾಡಿಕೊಂಡಿದ್ದಾರೆ.
ಎಂ.ಎ ಪದವೀಧರನಾಗಿರುವ ನಾನು ಒಕ್ಕಲಿಗ ಸಮುದಾಯಕ್ಕೆ ಸೇರಿದವನಾಗಿದ್ದು, ಕಾಂಗ್ರೆಸ್ ಕಾರ್ಯಕರ್ತನಾಗಿ, ಮಡಿಕೇರಿ ನಗರ ಕಾಂಗ್ರೆಸ್ ಉಪಾಧ್ಯಕ್ಷನಾಗಿ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷನಾಗಿ ಸಕ್ರಿಯವಾಗಿ ಕಾಂಗ್ರೆಸ್ ಪಕ್ಷದಲ್ಲಿ ತೊಡಗಿಸಿಕೊಂಡಿದ್ದೇನೆ. ಕಳೆದ ಬಾರಿ ನಗರಸಭೆ ಚುನಾವಣೆಯಲ್ಲಿ ವಾರ್ಡ್ ಸಂಖ್ಯೆ 2 ರಿಂದ ಸ್ಪರ್ಧಿಸಲು ನನಗೆ ಬಿ ಫಾರಂ ನೀಡಲಾಯಿತು. ಆದರೆ ಬೇರೆಯವರಿಗೆ ಟಿಕೆಟ್ ನೀಡಿದ ಪರಿಣಾಮ ಸ್ಪರ್ಧಿಸುವ ಅವಕಾಶ ತಪ್ಪಿ ಹೋಯಿತು. ಆದರೂ ನಾನು ಪಕ್ಷ ನಿಷ್ಠೆಯಿಂದ ಕಾಂಗ್ರೆಸ್ ನಲ್ಲಿದ್ದುಕೊಂಡೇ ವಿಧಾನಸಭಾ ಚುನಾವಣೆಯಲ್ಲಿ ಗೆಲುವಿಗಾಗಿ ಶ್ರಮಿಸಿದ್ದೇನೆ. ಆದ್ದರಿಂದ ನನಗೆ ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ಸಿಗಲಿದೆ ಎಂದು ವಿ.ಜಿ.ಮೋಹನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.









