ವಾಷಿಂಗ್ಟನ್ : ‘ಕಾಂತಾರ’ಚಿತ್ರವನ್ನು ನಿರ್ದೇಶಿಸಿ ದೇಶ ವಿದೇಶದಲ್ಲಿ ಜನಪ್ರಿಯತೆ ಗಳಿಸಿದ ಉಡುಪಿ ಜಿಲ್ಲೆಯ ಕುಂದಾಪುರ ಮೂಲದವರಾದ ರಿಷಬ್ ಶೆಟ್ಟಿ ಅವರಿಗೆ ಇತ್ತೀಚೆಗೆ ಅಮೆರಿಕ ಕನ್ನಡಿಗರು ‘ವಿಶ್ವ ಶ್ರೇಷ್ಠ ಕನ್ನಡಿಗ 2023’ ಪ್ರಶಸ್ತಿ ಪ್ರದಾನ ಮಾಡಿದರು.
ರಿಷಬ್ ಶೆಟ್ಟಿ ತಮ್ಮ ಪತ್ನಿ ಪ್ರಗತಿ ಶೆಟ್ಟಿ ಜೊತೆಗೂಡಿ ವಾಷಿಂಗ್ಟನ್ ನಗರದ ಪ್ಯಾರಾಮೌಂಟ್ ಥಿಯೇಟರ್ ಗೆ ತೆರಳಿ ಪ್ರಶಸ್ತಿ ಸ್ವೀಕರಿಸಿದರು.
ವಾಷಿಂಗ್ಟನ್ ರಾಜ್ಯದ ಕನ್ನಡಿಗರಾದ ಮನು ಗೌರವ್ ಮತ್ತು ತಂಡದವರು, ಸಿಯಾಟಲ್ನಲ್ಲಿರುವ ಸಹ್ಯಾದ್ರಿ ಕನ್ನಡ ಸಂಘ ರಿಷಬ್ ಶೆಟ್ಟಿ ಅವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಿದೆ.
ಹನಿಯೊಳಗೊಂದು ಸಾಗರವೇ ಇರುವಂತೆ, ಕನ್ನಡವನ್ನು ಹೃದಯದಲ್ಲಿಟ್ಟುಕೊಂಡು ದೂರದ ಅಮೇರಿಕಾದಲ್ಲಿ ನೆಲೆಸಿರುವ ಸಹಸ್ರಾರು ಹೆಮ್ಮೆಯ ಕನ್ನಡಿಗರ ಸಮ್ಮುಖದಲ್ಲಿ –
ಸಹ್ಯಾದ್ರಿ ಕನ್ನಡ ಸಂಘದ ವತಿಯಿಂದ ವಾಷಿಂಗ್ಟನ್ನ ಸಿಯಾಟಲ್ನಲ್ಲಿ “ವಿಶ್ವ ಶ್ರೇಷ್ಠ ಕನ್ನಡಿಗ 2023” ಪ್ರಶಸ್ತಿ ನೀಡಿದ್ದಾರೆ. ಈ ಪ್ರೀತಿ ಮತ್ತು ಪ್ರೋತ್ಸಾಹಕ್ಕೆ ನಾನು ಸದಾ ಆಭಾರಿ ಎಂದು ಟ್ವಿಟರ್ ಮೂಲಕ ರಿಷಬ್ ಶೆಟ್ಟಿ ಧನ್ಯವಾದ ಸಲ್ಲಿಸಿದ್ದಾರೆ.