ಚೆಯ್ಯಂಡಾಣೆ ಜೂ.28 : ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ 18 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಜೀವನಕ್ಕೆ ಕಾಲಿಟ್ಟ ಮುಖ್ಯ ಶಿಕ್ಷಕಿ ಮೀನಾ ಅವರನ್ನು ಶಾಲಾ ಆಡಳಿತ ಮಂಡಳಿ ಹಾಗೂ ಸ್ಥಳೀಯ ಗ್ರಾಮಸ್ಥರು ಕ್ಷೇತ್ರ ಶಿಕ್ಷಣ ಅಧಿಕಾರಿಗಳ ಸಮ್ಮುಖದಲ್ಲಿ ಸನ್ಮಾನಿಸಿ ಕಿರು ಕಾಣಿಕೆ ನೀಡಿ ಬೀಳ್ಕೊಟ್ಟರು.
ಕ್ಷೇತ್ರ ಸಮನ್ವಯ ಅಧಿಕಾರಿ ನಳಿನಿ ಮಾತನಾಡಿ, ತಮ್ಮ ಸೇವಾಕಾರ್ಯದಲ್ಲಿ ಶಿಕ್ಷಕರು ಹಾಗೂ ಮಕ್ಕಳ ನಡುವೆ ಅವಿನಾಭವ ಸಂಬಂಧ ಹೊಂದಿದ್ದು, ಶಾಲೆಯನ್ನ ಅವರ ಭವಿಷ್ಯವನ್ನ ರೂಪಿಸುವಲ್ಲಿ ಮುಖ್ಯಪಾತ್ರವಾಹಿಸಿರುತ್ತಾರೆ. ನಿವೃತ್ತಿ ಸಂದರ್ಭ ಶಾಲೆ ಹಾಗೂ ವಿದ್ಯಾರ್ಥಿಗಳನ್ನು ಬಿಟ್ಟುಹೋಗುವುದು ಸವಾಲಿನ ಕೆಲಸ ಎಂದರು.
ತಾ.ಪಂ ಮಾಜಿ ಸದಸ್ಯೆ ಉಮಾ ಪ್ರಭು ಮಾತನಾಡಿ, ತಾಲೂಕು ಪಂಚಾಯಿತಿ ಸದಸ್ಯೆ ಯಾಗಿ ಆಯ್ಕೆ ಆದ ಅಂದಿನಿಂದ ಇಂದಿನ ವರೆಗೆ ಶಿಕ್ಷಕಿ ಮೀನಾ ಅವರೊಂದಿಗಿನ ಒಡನಾಟವನ್ನು ನೆನೆದರು. ಉತ್ತಮ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಇವರ ನಿವೃತ್ತಿ ಜೀವನ ಸುಖಕರವಾಗಲೆಂದು ಶುಭ ಹಾರೈಸಿದರು.
ಸಿ ಆರ್ ಪಿ ಉಷಾ ಮಾತನಾಡಿ, ನನ್ನ ಕ್ಲಸ್ಟರ್ ಮಟ್ಟದಲ್ಲಿ ಉತ್ತಮ ಶಿಕ್ಷಕಿಯಾಗಿ, ಉತ್ತಮ ಸೇವೆ ಸಲ್ಲಿಸಿದ್ದೀರಾ ನಮಗೆ ನಿಮ್ಮ ಸೇವಾವಧಿಯಲ್ಲಿ ಉತ್ತಮ ಸಹಕಾರ ಸಿಕ್ಕಿದೆ ನಿಮ್ಮ ನಿವೃತ್ತಿ ಜೀವನ ಸುಖಕರವಾಗಿರಲೆಂದು ಹಾರೈಸಿದರು.
ಸನ್ಮಾನ ಸ್ವೀಕರಿಸಿ ಮಾಡಿದ ಮುಖ್ಯ ಶಿಕ್ಷಕಿ ಮೀನಾ, ಕಹಿ ಹಾಗೂ ಸಿಹಿ ನೆನಪುಗಳನ್ನು ವೇದಿಕೆಯಲ್ಲೇ ಹಂಚಿಕೊಂಡರು. ವಿದ್ಯಾರ್ಥಿಗಳೊಂದಿಗೆ ಸೇರಿಕೊಂಡು ನಮ್ಮ ಕಷ್ಟ ಸುಖ ಗಳನ್ನು ಮರೆತು ಯಾವುದೇ ಚಿಂತೆ ಇಲ್ಲದೆ ವಿದ್ಯಾರ್ಥಿ ಗಳೊಂದಿಗೆ ಸಮಯವನ್ನು ಕಳೆಯುತ್ತಿದ್ದೆ ಎಂದು ನಿವೃತ್ತಿ ಜೀವನದ ಬಗ್ಗೆ ತಮ್ಮ ಅನಿಸಿಕೆಗಳನ್ನು ತಿಳಿಸಿದರು.
ಈ ಸಂದರ್ಭ ಆಡಳಿತ ಮಂಡಳಿ, ಗ್ರಾಮಸ್ಥರು, ಪೋಷಕರು ವಿದ್ಯಾರ್ಥಿಗಳು ಶಿಕ್ಷಕಿ ಮೀನಾ ಗೆ ಕಿರು ಕಾಣಿಕೆ ನೀಡಿ ನಿವೃತ್ತಿ ಜೀವನಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿ ಎಂ ಸಿ ಅಧ್ಯಕ್ಷ ರತ್ನ ವಹಿಸಿದರು.
ಸರಸ್ವತಿ, ಮಂಜುಳಾ, ರೇಖಾ, ವೀಣಾ, ಕಲ್ಪನಾ, ನಿಶಾ , ಶಿಕ್ಷಕಿ ಆರ್ಶಿಯ, ದಮಯಂತಿ ಹಾಗೂ ಪೋಷಕರು,ಸ್ಥಳೀಯ ಆರೋಗ್ಯ ಕೇಂದ್ರದ ಸಹಾಯಕಿಯರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪ್ರಾರ್ಥನೆಯನ್ನು ಲೀಲಾವತಿ, ಸ್ವಾಗತವನ್ನು ನೂತನ ಮುಖ್ಯ ಶಿಕ್ಷಕಿ ಪ್ರೇಮಾ ಕುಮಾರಿ ನಡೆಸಿದರೆ, ನಿರೂಪಣೆಯನ್ನು ಹಾಗೂ ವಂದನೆಯನ್ನು ಶಿಕ್ಷಕಿ ಜಯಪ್ರದ ನಿರ್ವಹಿಸಿದರು .
ವರದಿ : ಅಶ್ರಫ್








