ಚೆಯ್ಯಂಡಾಣೆ ಜೂ.28 : ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡಾನೆಗಳ ಉಪಟಳ ಮಿತಿ ಮೀರಿದ್ದು, ಕೃಷಿ ಫಸಲು ಮತ್ತು ಮನೆ, ತೋಟದ ಗೇಟ್ ಗೆ ಹಾನಿ ಮಾಡಿರುವ ಘಟನೆ ನಡೆದಿದೆ.
ಕಳೆದ ಕೆಲವು ದಿನಗಳಿಂದ ಗ್ರಾಮದ ಸುತ್ತಮುತ್ತ ನೆಲೆ ನಿಂತಿರುವ ಕಾಡಾನೆಗಳ ಹಿಂಡು ರಾತ್ರಿ, ಹಗಲೆನ್ನದೆ ತೋಟಗಳಿಗೆ ಲಗ್ಗೆ ಇಡುತ್ತಿವೆ. ಬಾಳೆ, ಅಡಿಕೆ, ಕಾಫಿ, ತೆಂಗು, ಕಾಳುಮೆಣಸು ಗಿಡಗಳನ್ನು ನಾಶ ಪಡಿಸಿವೆ. ಕಳೆದವಾರ ಚೇಲಾವರ ಗ್ರಾಮದಲ್ಲಿ ಮಹಿಳೆಯೊಬ್ಬರ ಮೇಲೆ ಕಾಡಾನೆ ದಾಳಿ ಮಾಡಿದ್ದು, ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದರು. ಇದೇ ಗ್ರಾಮದ ನಿವಾಸಿ ಪಿ.ಪಿ.ಮಾಚಯ್ಯ ಎಂಬುವವರ ಮನೆಯಂಗಳಕ್ಕೆ ಕಾಡಾನೆ ನುಗ್ಗಿ ಇಂಟರ್ ಲಾಕ್ ಗಳನ್ನು ಹಾನಿಪಡಿಸಿದೆ.
ಸಮೀಪದಲ್ಲೇ ಇರುವ ಸುಧೀರ್ ರೆಡ್ಡಿ ಎಂಬುವವರ ತೋಟಕ್ಕೆ ತೆರಳುವ ಗೇಟ್ ನ್ನು ಬೀಳಿಸಿದೆ. ಕೋಕೇರಿಯಲ್ಲ್ಲಿ ಮಚ್ಚಂಡ ಸುಮತಿ ಎಂಬುವವರ ತೋಟಕ್ಕೆ ಲಗ್ಗೆ ಇಟ್ಟಿರುವ ಕಾಡಾನೆಗಳು ಅಪಾರ ನಷ್ಟ ಉಂಟು ಮಾಡಿವೆ. ರಾತ್ರಿ ವೇಳೆ 9 ಕಾಡಾನೆಗಳ ಹಿಂಡು ಮುಖ್ಯ ರಸ್ತೆಯಲ್ಲಿ ಸಂಚರಿಸುತ್ತಿರುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಗ್ರಾಮದಲ್ಲಿ ಆತಂಕ ಮೂಡಿದೆ.
ಪಾದಾಚಾರಿಗಳು, ವಾಹನ ಸವಾರರು, ಕಾರ್ಮಿಕರು ಹಾಗೂ ಶಾಲಾ, ಕಾಲೇಜು ವಿದ್ಯಾರ್ಥಿಗಳು ಜೀವ ಪಣಕ್ಕಿಟ್ಟು ತೆರಳಬೇಕಾಗಿದೆ. 11 ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ತೋಟಕ್ಕೆ ನುಗ್ಗಿ ಅಪಾರ ಪ್ರಮಾಣದಲ್ಲಿ ಹಾನಿಯುಂಟು ಮಾಡಿವೆ. ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೆ ಸಿಬ್ಬಂದಿಗಳು ಬಂದು ಕೇವಲ ಮಾಹಿತಿ ಸಂಗ್ರಹಿಸಿ ತೆರಳುತ್ತಾರೆ. ಇದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಆರೋಪಿಸಿರುವ ಗ್ರಾಮಸ್ಥರು, ಅರಣ್ಯ ಇಲಾಖೆ ತಕ್ಷಣ ಕಾಡಾನೆಯನ್ನು ಸೆರೆ ಹಿಡಿಯಬೇಕೆಂದು ಒತ್ತಾಯಿಸಿದ್ದಾರೆ.
ವರ್ಷದಿಂದ ವರ್ಷಕ್ಕೆ ಕಾಡಾನೆಗಳ ಹಾವಳಿ ಮಿತಿ ಮೀರುತ್ತಿದ್ದು, ಶಾಸಕರು ಹಾಗೂ ಸರ್ಕಾರ ಶಾಶ್ವತ ಪರಿಹಾರವನ್ನು ಸೂಚಿಸಬೇಕು. ನಷ್ಟಕ್ಕೊಳಗಾದ ಕೃಷಿಕ ವರ್ಗಕ್ಕೆ ಪರಿಹಾರ ನೀಡಬೇಕು, ಕಾಡಾನೆಗಳನ್ನು ಕಾಡಿಗಟ್ಟಬೇಕು ಮತ್ತು ಪುಂಡಾನೆಯನ್ನು ಬಂಧಿಸಬೇಕೆಂದು ಆಗ್ರಹಿಸಿದ್ದಾರೆ. (ವರದಿ : ಅಶ್ರಫ್ ಚೆಯ್ಯಂಡಾಣೆ)










