ಮಡಿಕೇರಿ ಜೂ.28 : ಕೂರ್ಗ್ ಬ್ಲಡ್ ಫೌಂಡೇಶನ್ ಕರ್ನಾಟಕ (ರಿ) ಸಂಸ್ಥೆಯ ಎರಡನೇ ವಾರ್ಷಿಕೋತ್ಸವದ ಪ್ರಯುಕ್ತ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ , ಕೊಡಗು ರಕ್ತ ನಿಧಿ ಘಟಕ ಹಾಗೂ ನೇತ್ರ ಆಪ್ಟಿಕಲ್ಸ್ ಮಡಿಕೇರಿ ಇವರ ಸಹಯೋಗದೊಂದಿಗೆ ಬೃಹತ್ ರಕ್ತದಾನ ಶಿಬಿರ ಮತ್ತು ಉಚಿತ ನೇತ್ರ ತಪಾಸಣಾ ಶಿಬಿರ ನಡೆಯಿತು.
ಮಡಿಕೇರಿಯ ರಾಜ್ ದರ್ಶನ್ ಸಭಾಂಗಣದಲ್ಲಿ ನಡೆದ ಶಿಬಿರವನ್ನು ದೀಪ ಬೆಳಗಿಸುವುದರ ಮೂಲಕ ಗಣ್ಯರು ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಉದ್ಯಮಿ ಮೋಹನ್ ದಾಸ್, ಕೊ.ಬ್ಲ.ಫೌ ಸಂಸ್ಥೆಯ ಕಾರ್ಯವೈಖರಿ ಪ್ರೋತ್ಸಾಹದಾಯಕ ವಿಚಾರ. ತುರ್ತು ಪರಿಸ್ಥಿತಿಗಳಲ್ಲಿ ರಕ್ತವನ್ನು ಒದಗಿಸುವ ಈ ತಂಡದ ಕಾರ್ಯ ಶ್ರೇಷ್ಠವಾದುದು. ಜೊತೆಗೆ ಉಚಿತ ಕಣ್ಣಿನ ತಪಾಸಣೆ ಹಮ್ಮಿಕೊಂಡಿರುವುದು ಸಾರ್ವಜನಿಕರಿಗೆ ಬಹಳಷ್ಟು ಸಹಕಾರಿಯಾಗಿದೆ ಮುಂದಿನ ದಿನಗಳಲ್ಲಿ ಮತ್ತಷ್ಟು ಕಾರ್ಯಕ್ರಮಗಳು ಮೂಡಿ ಬರಲಿ ಎಂದು ಆಶಿಸಿದರು.
ನಮ್ಮ ಕೊಡಗು ತಂಡದ ಸಂಸ್ಥಾಪಕ ನೌಶಾದ್ ಜನ್ನತ್ ಮಾತನಾಡಿ, ಕೊ.ಬ್ಲ.ಫೌ ತಂಡದ ಕೆಲಸವನ್ನು ಕುರಿತು ಹೆಮ್ಮೆ ವ್ಯಕ್ತಪಡಿಸಿದರು. ಕೋವಿಡ್ ಸಂದರ್ಭದಲ್ಲಿ ವಿನು ಹಾಗು ಸಮೀರ್ ಮಾಡಿದ ಸಾಮಾಜಿಕ ಕಾರ್ಯವನ್ನು ಪ್ರಶಂಸಿಸಿದರು.
ಬನವಾಸಿ ಕನ್ನಡಿಗರು ಸಂಸ್ಥೆಯ ಜೈಕಿರಣ್, ಕೊಡಗಿನ ಮಾತೆ ಕಾವೇರಿ ತಾಯಿಯನ್ನು ನೆನಪಿಸಿಕೊಂಡು, ಇಂತಹ ಪವಿತ್ರ ನೆಲದಲ್ಲಿ ಸಾಮಾಜಿಕವಾಗಿ ಕೆಲಸ, ಕಾರ್ಯಗಳನ್ನು ಮಾಡಲು ಬಹಳ ಹೆಮ್ಮೆಯೆನಿಸುತ್ತದೆ ಎಂದು ನುಡಿದರು.
ಕಾರುಣ್ಯ ನಿಧಿ ಕರ್ನಾಟಕ ಸಂಸ್ಥೆಯ ಜಲೀಲ್, ರಕ್ತದ ಕೊರತೆ, ಲಭ್ಯತೆ ಹಾಗೂ ಜನರಲ್ಲಿರುವ ಸಹಕಾರ ಮನೋಭಾವದ ಕುರಿತು ಮಾತನಾಡಿದರು.
ಸಮಾಜ ಸೇವಕ ಅರುಣ್, ಕಡಗದಾಳು ಗ್ರಾಮದಲ್ಲಿ ಮುಂದಿನ ದಿನಗಳಲ್ಲಿ ರಕ್ತದಾನ ಶಿಬಿರ ನಡೆಸುವ ಮೂಲಕ ನಿಮ್ಮ ಕಾರ್ಯಕ್ರಮಗಳಿಗೆ ಕೈಜೋಡಿಸುತ್ತೇವೆ ಎಂದು ಭರವಸೆ ನೀಡಿದರು.
ರಕ್ತನಿಧಿ ಘಟಕದ ಮುಖ್ಯಸ್ಥೆ ಡಾ. ಗಾಯತ್ರಿ ರಕ್ತದಾನದ ಮಹತ್ವ, ರಕ್ತದ ಗುಂಪುಗಳ ವರ್ಗೀಕರಣ ಮುಂತಾದ ವಿಚಾರಗಳ ಕುರಿತು ಮಾಹಿತಿ ಒದಗಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೂರ್ಗ್ ಬ್ಲಡ್ ಫೌಂಡೇಷನ್ ಸಂಸ್ಥೆಯ ಸ್ಥಾಪಕಾಧ್ಯಕ್ಷ ಸಮೀರ್, ಎಲ್ಲರ ಸಲಹೆ, ಸೂಚನೆ, ಸಹಕಾರದಿಂದ ಈಗ ಎರಡನೇ ವರ್ಷಕ್ಕೆ ಕಾಲಿಟ್ಟಿದ್ದೇವೆ, ಮುಂದೆ ಇನ್ನಷ್ಟು ಶಿಬಿರಗಳನ್ನು ನಡೆಸುವ ಮೂಲಕ, ಜನರಿಗೆ ನೆರವಾಗಬೇಕು ಎನ್ನುವ ಮನದಿಚ್ಛೆಯನ್ನು ಎಲ್ಲರ ಮುಂದಿಟ್ಟರು.
ಉಚಿತ ಕಣ್ಣಿನ ತಪಾಸಣೆಯ ಮುಂದಾಳತ್ವ ವಹಿಸಿದ ನೇತ್ರ ಅಪ್ಟಿಕಲ್ಸ್ ನ ಅಝರ್ ಕಣ್ಣಿನ ದಾನದ ಮಹತ್ವ ಹಾಗೂ ಮನುಷ್ಯನಿಗೆ ಕಣ್ಣಿನ ಪ್ರಾಮುಖ್ಯತೆ, ಸುರಕ್ಷತೆ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಮಹಿಳಾ ಘಟಕದ ಸದಸ್ಯರು, ಪ್ರಮುಖರದ ವಿನು ಹಾಜರಿದ್ದರು.
ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1.30 ಗಂಟೆಯ ವೇಳೆಗೆ 52 ಯೂನಿಟ್ ರಕ್ತ ಸಂಗ್ರಹವಾಗಿದ್ದು, ಗ್ರಾಮಾಂತರ ಠಾಣಾ ಉಪನಿರೀಕ್ಷಕ ಅನೂಪ್ ಮಾದಪ್ಪ ರಕ್ತದಾನದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಬಹಳಷ್ಟು ಜನ ಉಚಿತ ಕಣ್ಣಿನ ತಪಾಸಣೆಯ ಅನುಕೂಲವನ್ನು ಪಡೆದುಕೊಂಡರು.
ಮಡಿಕೇರಿ ಅಲ್ಲದೆ ಬೆಂಗಳೂರು, ಮೈಸೂರು ಮತ್ತು ಹೊರಜಿಲ್ಲೆಗಳಿಂದ ಆಸಕ್ತ ರಕ್ತದಾನಿಗಳು ಆಗಮಿಸಿದ್ದು ಸೇವಾ ಮನೋಭಾವಕ್ಕೆ ಸಾಕ್ಷಿಯಾಯಿತು.
ಕಾರ್ಯಕ್ರಮದಲ್ಲಿ ಮೈಸೂರು ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷ ಟಿ.ತ್ಯಾಗರಾಜ್, ಬೆಂಗಳೂರಿನ ಬನವಾಸಿ ಕನ್ನಡಿಗರು ತಂಡ, ಕರುನಾಡ ರಕ್ತ ಸೈನಿಕರು, ದೇವೇಂದ್ರ ಪರಿಹಾರೀಯ, ಶಕ್ತಿ ಹಿರಿಯ ನಾಗರಿಕರ ವಸತಿ ನಿಲಯದ ಸತೀಶ್, ವಿಕಾಸ್ ಜನಸೇವಾ ಟ್ರಸ್ಟಿನ ರಮೇಶ್, ಆರಕ್ಷಕ ರಾಮಪ್ಪ ಬಿ.ಎಂ, ಕಿರಣ್ ಎಸ್.ಕೆ ಅವರ ಅತ್ಯುತ್ತಮ ಸಮಾಜಸೇವೆಯನ್ನು ಪರಿಗಣಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ರಕ್ತದಾನ ಮಾಡಿದ ಎಲ್ಲಾ ರಕ್ತದಾನಿಗಳಿಗೆ ಪ್ರಶಂಸನಾ ಪತ್ರವನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ನಿರೂಪಣೆಯನ್ನು ರಂಜಿತ್ ಕವಲಪಾರ ಹಾಗೂ ಕೌಸರ್ ನಿರ್ವಹಿಸಿದರು.