ನಾಪೋಕ್ಲು ಜೂ.30 : ದಾನಿಗಳಿಂದ ಸಂಗ್ರಹಿಸಿದ 13 ಲಕ್ಷ ರೂ.ನಲ್ಲಿ ನಿರ್ಮಿಸಲಾಗಿರುವ ಬೆಟ್ಟಗೇರಿ ಗ್ರಾ.ಪಂ ವ್ಯಾಪ್ತಿಯ ಅರುವತ್ತೋಕ್ಲುವಿನ ಶ್ರೀ ಮಹಾ ವಿಷ್ಣು ದೇವಾಲಯದ ನೂತನ ಗೋದಾಮು ಮತ್ತು ಅಡುಗೆ ಕೋಣೆ ಕಟ್ಟಡದವನ್ನು ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಪೂಜಾರಿರ ಮಾದಪ್ಪ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಕಟ್ಟಡದ ಕೆಲಸ ಕಾರ್ಯಗಳಿಗೆ ಸಹಕರಿಸಿದ ಎಲ್ಲರಿಗೂ ಅಭಿನಂದಿಸಿ ಶುಭ ಕೋರಿದರು.
ದೇವಾಲಯದ ಆಡಳಿತ ಮಂಡಳಿ ಸದಸ್ಯ ಚೆರುಮಾಡಂಡ ಸತೀಶ್ ಸೋಮಣ್ಣ ಮಾತನಾಡಿ, ಕಟ್ಟಡ ನಿರ್ಮಾಣದ ಖರ್ಚು ವೆಚ್ಚಗಳ ಬಗ್ಗೆ ಹಾಗೂ ಮುಂದೆ ದೇವಾಲಯಕ್ಕೆ ಅವಶ್ಯಕವಾಗಿರುವ ಕೆಲಸ ಕಾರ್ಯಗಳ ಬಗ್ಗೆ ಮಾತನಾಡಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಈ ಸಂದರ್ಭ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಸಹಕರಿಸಿದ ದಾನಿಗಳಿಗೆ ಹಾಗೂ ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರಾದ ತಿಲಾಕ್ಷ ಅವರುಗಳನ್ನು ಫಲ ತಾಂಬೂಲ ಕಿರುಕಾಣಿಕೆ ನೀಡಿ ಗೌರವಿಸಲಾಯಿತು.
ಇದಕ್ಕೂ ಮೊದಲು ಬೆಳಗ್ಗೆ ಗಣಪತಿ ಹೋಮ ಸೇರಿದಂತೆ ವಿವಿಧ ಪೂಜಾ ವಿಧಿ ವಿಧಾನವನ್ನು ದೇವಾಲಯದ ಅರ್ಚಕ ಪ್ರಸಾದ್ ಭಟ್ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ದೇವಾಲಯದ ಆಡಳಿತ ಮಂಡಳಿಯ ಉಪಾಧ್ಯಕ್ಷ ಪುತ್ತರಿರ ಸೋಮಯ್ಯ, ಖಜಾಂಜಿ ಮುಂಜಾಂದಿರ ವಾಸು ನಾಣಯ್ಯ, ಕಾರ್ಯದರ್ಶಿ ಗೋವಿಂದಮ್ಮನ ರಾಮಯ್ಯ, ಊರಿನ ದಾನಿಗಳು ಹಾಗೂ ಹಿರಿಯರಾದ ತೆನ್ನಿರ ಉಮ್ಮಣ್ಣ ತಿಮ್ಮಯ್ಯ, ಮೂಟೆರ ಮುದ್ದಪ್ಪ, ಮೂಟೆರ ಪುಷ್ಪಾವತಿ, ಗೋವಿಂದಮ್ಮನ ಮುತ್ತಪ್ಪ, ಗ್ರಾ.ಪಂ ಸದಸ್ಯ ತಾಳೂರು ದಿನೇಶ್, ಮಾಜಿ ಸದಸ್ಯ ತೆನ್ನಿರ ರಮೇಶ್ ಪೊನ್ನಪ್ಪ, ದೇವಾಲಯದ ಆಡಳಿತ ಮಂಡಳಿ ಸದಸ್ಯ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ : ದುಗ್ಗಳ ಸದಾನಂದ