ಮಡಿಕೇರಿ ಜು 1 : ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಕಳೆದ ಆರು ವರ್ಷಗಳಿಂದ ನಮ್ಮ ಜನಾಂಗದ ಸಂಘಟನೆ ಹಾಗೂ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುವುದರೊಂದಿಗೆ ನಮ್ಮ ಸಂಸ್ಕೃತಿ, ಆಚಾರ, ವಿಚಾರಗಳ ಉಳಿಸುವ ಸಂಕಲ್ಪದೊಂದಿಗೆ ಹಲವು ಹೋರಾಟ ನಡೆಸುತ್ತಿದೆ. ಇದರ ಭಾಗವಾಗಿ ಜು.5 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನೂತನ ಶಾಸಕರು, ಸಚಿವರಿಗೆ ಗೌರವ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಹೆಚ್.ಎಂ. ದಿವಾಕರ್ ತಿಳಿಸಿದರು.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಭಾರತೀಯ ಸಂಸ್ಕೃತಿ,ನಾಡು ನುಡಿ ರಕ್ಷಣೆಯೊಂದಿಗೆ ನಮ್ಮ ಜನಾಂಗದ ಉನ್ನತಿಯೂ ಮುಖ್ಯವಾಗಿದೆ. ರಾಜಕೀಯ ಕ್ಷೇತ್ರದಲ್ಲಿ ಈ ಹಿಂದಿನಿಂದಲೂ ನಮ್ಮ ಸಮುದಾಯದ ಕೊಡುಗೆ ಅಪಾರ ಹಾಗೂ ಗಮನಾರ್ಹವಾದದು ಎಂದರು.
ಈ ಬಾರಿಯ ವಿಧಾನ ಸಭಾ ಚುನಾವಣೆಯಲ್ಲೂ ವಿವಿಧ ಪಕ್ಷಗಳಿಂದ ನಮ್ಮ ಸಮುದಾಯದವರು ಜಯಗಳಿಸಿದ್ದಾರೆ.
ಪ್ರಸ್ತುತ ಇರುವ ಲೋಕಸಭೆಯಲ್ಲಿ ಹಲವು ಮಂದಿ ಸಂಸದರಾಗಿದ್ದಾರೆ, ಕೇಂದ್ರ ಸಚಿವರಾಗಿರುವ ಹೆಮ್ಮೆಯ ಸಂಗತಿ ಹಾಗೂ ಇವರುಗಳನ್ನು ಅಭಿನಂದಿಸುವ ಗೌರವಿಸುವ ಜವಾಬ್ದಾರಿ ನಮ್ಮದು.
ಈ ಹಿನ್ನೆಲೆಯಲ್ಲಿ ಜು.5 ರಂದು ಸಂಜೆ 5 ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ವೀರಶೈವ ಲಿಂಗಾಯತ ಸಮಾಜದ ಶಾಸಕರು, ಸಂಸದರು, ಸಚಿವರುಗಳಿಗೆ ಅಭಿನಂದನಾ ಸಮಾರಂಭ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಬಾಳೆ ಹೊನ್ನೂರು ರಂಭಾಪುರಿ ಪೀಠದ ಜಗದ್ಗು ರುಗಳಾದ ಪರಮ ಪೂಜ್ಯ ಶ್ರೀ ಪ್ರಸನ್ನ ರೇಣುಕಾ ಡಾ. ವೀರಸೋಮೇಶ್ವರ ರಾಜ ದೇಶೀಕೇಂದ್ರ ಶಿವಾಚಾರ್ಯ ಭಗವತ್ಪಾದರು ವಹಿಸಿಕೊಂಡು ಆಶೀರ್ವದಿಸಲಿದ್ದಾರೆ ಎಂದರು.
ನಾಡಿನ ವಿವಿಧ ಮಠಗಳ ಪೂಜ್ಯರುಗಳು, ಗಣ್ಯರು ಭಾಗವಹಿಸುವ ಈ ಕಾರ್ಯ ಕ್ರಮಕ್ಕೆ ವೀರಶೈವ ಲಿಂಗಾಯತ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಕೋರಿದರು.
ಸುದ್ದಿಗೋಷ್ಠಿ ಯಲ್ಲಿ ಸಂಘಟನೆ ಪದಾಧಿಕಾರಿಗಳಾದ ಎನ್.ಎ.ಅಶ್ವಥ್ ಕುಮಾರ್, ದಯಾನಂದ, ಡಿ.ಎಸ್.ವಿಶ್ವನಾಥ್, ಡಿ.ಎಸ್.ಮಹೇಶ್, ಕೊಡ್ಲಿಪೇಟೆ ಹೋಬಳಿ ಘಟಕದ ಅಧ್ಯಕ್ಷ ಸಿ.ವಿ.ಪ್ರಸನ್ನ, ಇದ್ದರು.