ಮಡಿಕೇರಿ ಜು.1 : ಕ್ರೈಸ್ತ ಸಮುದಾಯದವರು ಕಾಂಗ್ರೆಸ್ ಪಕ್ಷದ ಪ್ರಬಲ ಬೆಂಬಲಿಗರಾಗಿದ್ದು, ಈ ಬಾರಿ ಪಕ್ಷದಲ್ಲಿ ಕ್ರೈಸ್ತ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ನೀಡಬೇಕೆಂದು ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಕ್ರಿಶ್ಚಿಯನ್ ಘಟಕ ಒತ್ತಾಯಿಸಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಸದಸ್ಯ ವಿ.ಎ.ಲಾರೆನ್ಸ್ ಜಿಲ್ಲೆಯಲ್ಲಿ ಕ್ರೈಸ್ತರಿಗೆ ಕಾಂಗ್ರೆಸ್ ಪಕ್ಷದಲ್ಲಿ ಸ್ಥಾನಮಾನದ ಕೊರತೆ ಇದೆ ಎಂದರು.
ಕ್ರೈಸ್ತ ಧರ್ಮೀಯರ ಶೇ.98 ರಷ್ಟು ಮತಗಳು ಕಾಂಗ್ರೆಸ್ ಪಕ್ಷಕ್ಕೆ ಚಲಾವಣೆಯಾಗುತ್ತಿದೆ. ಆದರೆ ಪಕ್ಷದಲ್ಲಿ ಸೂಕ್ತ ಪ್ರಾತಿನಿಧ್ಯ ಮಾತ್ರ ದೊರೆಯುತ್ತಿಲ್ಲ. ಈ ಕೊರತೆಯನ್ನು ನೀಗಿಸಲು ಪಕ್ಷದ ರಾಜ್ಯಾಧ್ಯಕ್ಷರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲೆಯ ಶಾಸಕರುಗಳು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಸ್ವಾತಂತ್ರ್ಯ ಬಂದ ನಂತರ ಶಿಕ್ಷಣ, ಸಮಾಜ ಸೇವೆ, ವೈದ್ಯಕೀಯ, ಮಾಧ್ಯಮ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿರುವ ಕ್ರೈಸ್ತರು ದೇಶದ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅಲ್ಲದೆ ಕಾಂಗ್ರೆಸ್ ಪಕ್ಷದ ಬಲವರ್ಧನೆಯಲ್ಲೂ ತೊಡಗಿಸಿಕೊಂಡಿದ್ದಾರೆ. ಆದ್ದರಿಂದ ರಾಜ್ಯ ಸರ್ಕಾರ ಕ್ರೈಸ್ತ ಬಾಂಧವರ ಎಲ್ಲಾ ಕೊಡುಗೆಗಳನ್ನು ಪರಿಗಣಿಸಿ ನಿಗಮ ಮಂಡಳಿಗಳಿಗೆ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಸಂದರ್ಭ ಕ್ರೈಸ್ತರಿಗೆ ಪ್ರತ್ಯೇಕ ಪ್ರಾತಿನಿಧ್ಯ ನೀಡಬೇಕೆಂದು ಲಾರೆನ್ಸ್ ಒತ್ತಾಯಿಸಿದರು.
ಮೂಡದಲ್ಲಿ ಮುಸ್ಲಿಮರು ಸೇರಿದಂತೆ ಎಲ್ಲಾ ಸಮುದಾಯದವರಿಗೆ ಈಗಾಗಲೇ ಪ್ರಾತಿನಿಧ್ಯ ನೀಡಲಾಗಿದ್ದು, ಕ್ರೈಸ್ತ ಧರ್ಮೀಯರಿಗೆ ಇಲ್ಲಿಯವರೆಗೆ ಅವಕಾಶವೇ ದೊರೆತ್ತಿಲ್ಲ. ಈ ಬಾರಿಯಾದರೂ ಕ್ರೈಸ್ತರಿಗೆ ಅವಕಾಶ ಕಲ್ಪಿಸಲು ಕಾಂಗ್ರೆಸ್ ರಾಜ್ಯಾಧ್ಯಕ್ಷರು ಹಾಗೂ ಜಿಲ್ಲೆಯ ಶಾಸಕರುಗಳು ಮುಂದಾಗಬೇಕು ಎಂದರು.
ಮತ್ತೋರ್ವ ಸದಸ್ಯ ಜಾನ್ಸನ್ ಪಿಂಟೋ ಮಾತನಾಡಿ, ಕಳೆದ ಅನೇಕ ವರ್ಷಗಳಿಂದ ಕ್ರೈಸ್ತ ಸಮುದಾಯದ ಮಂದಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಲು ಸಾಕಷ್ಟು ಶ್ರಮಿಸಿದ್ದಾರೆ. ಆದರೆ ಪಕ್ಷಕ್ಕಾಗಿ ದುಡಿದ ಕ್ರೈಸ್ತ ನಾಯಕರನ್ನು ಸೂಕ್ತ ರೀತಿಯಲ್ಲಿ ಪರಿಗಣಿಸಿಲ್ಲ. ಆದ್ದರಿಂದ ಬಹುಮತ ಪಡೆದು ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಈ ಬಾರಿಯಾದರೂ ಸ್ಥಳೀಯ ಸಂಸ್ಥೆ, ನಿಗಮ, ಮಂಡಳಿ ಮತ್ತು ಪಕ್ಷದಲ್ಲಿ ಕೂಡ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕೆಂದು ಒತ್ತಾಯಿಸಿದರು.
ಸದಸ್ಯ ಸುನೀಲ್ ಪತ್ರವೋ ಮಾತನಾಡಿ, ಕ್ರೈಸ್ತ ಸಮುದಾಯಕ್ಕೆ ಸೂಕ್ತ ಸ್ಥಾನಮಾನ ನೀಡುವ ಮೂಲಕ ಪಕ್ಷಕ್ಕಾಗಿ ನೀಡಿದ ಕೊಡುಗೆ ಮತ್ತು ಸೇವೆಯನ್ನು ಪರಿಗಣಿಸಬೇಕೆಂದು ಹೇಳಿದರು.
ಕ್ರೈಸ್ತರ ಮೇಲಿನ ದಾಳಿಯ ಮಣಿಪುರ ಘಟನೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ನಡೆದ ಪ್ರತಿಭಟನೆಗೆ ಸಹಕಾರ ನೀಡಿದವರಿಗೆ ಧನ್ಯವಾದ ಸಲ್ಲಿಸುವುದಾಗಿ ಹೇಳಿದ ಅವರು, ಈ ರೀತಿಯ ಘಟನೆಗಳು ನಡೆಯದಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಫಿಲೋಮಿನಾ, ಸದಸ್ಯ ವಿ.ಎಸ್.ಸಜಿ ಹಾಗೂ ಮುಖಂಡ ಜೊಜೆಫ್ ವಿನ್ಸೆಂಟ್ ಉಪಸ್ಥಿತರಿದ್ದರು.









