ಮಡಿಕೇರಿ ಜು.1 : ಕೊಡಗಿನಲ್ಲಿ ಶೇ.33 ರಷ್ಟು ಇರಬೇಕಾಗಿದ್ದ ಅರಣ್ಯ ವ್ಯಾಪ್ತಿಯು ಈಗ ಶೇ.21 ರಷ್ಟು ನಷ್ಟವಾಗಿರುವ ಅರಣ್ಯವನ್ನು ಪುನರ್ ಭರಿಸುವುದು ನಮ್ಮ ಹೊಣೆಯಾಗಿರುತ್ತದೆ. ಯುವಕರು, ಸಾರ್ವಜನಿಕರು ಗಿಡ ನೆಟ್ಟು, ಆ ಗಿಡಕ್ಕೆ ಯಾವುದೇ ಹಾನಿಯಾಗದಂತೆ ರಕ್ಷಿಸಬೇಕು ಎಂದು ಕೊಡಗು ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಬಿ ಎನ್.ಎನ್.ಮೂರ್ತಿ ಅಭಿಪ್ರಾಯಪಟ್ಟರು.
ಕೊಡಗು ಜಿಲ್ಲಾ ಅರಣ್ಯ ಇಲಾಖೆ, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ, ಎನ್‍ಸಿಸಿ ಸಂಯುಕ್ತ ಆಶ್ರಯದಲ್ಲಿ “ನನ್ನ ಗಿಡ ನನ್ನ ಹೆಮ್ಮೆ ” ಎಂಬ ಘೋಷ ವಾಕ್ಯದ ಮೂಲಕ ಕಾಲೇಜಿನ ಮೈದಾನದಲ್ಲಿ ಅರಣ್ಯ ಮಹೋತ್ಸವವನ್ನು ಆಚರಿಸಲಾಯಿತು.
ಕಾರ್ಯಕ್ರಮದ ಮೊದಲಿಗೆ ಅತಿಥಿ ಗಣ್ಯರು ಹಾಗೂ ವಿದ್ಯಾರ್ಥಿಗಳು ಪ್ರತಿಜ್ಞಾವಿಧಿ ಸ್ವೀಕರಿಸಿದರು.
ಮಳೆಯ ನಡುವೆಯೂ ವಿದ್ಯಾರ್ಥಿಗಳು ತಮ್ಮ ಹೆಸರಿನಲ್ಲಿ ಒಂದೊಂದು ಗಿಡ ನೆಡುವ ಮೂಲಕ ಸಂಭ್ರಮಿಸಿದರು. ತಾವು ಇನ್ನೆಂದೂ ಮರಗಿಡಗಳನ್ನು ಹಾನಿಗೊಳಿಸುವುದಿಲ್ಲವೆಂದು ಪ್ರತಿಜ್ಞಾ ವಿಧಿಯಂತೆ ಮುನ್ನೆಡೆಯೂದಾಗಿಯೂ ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆಕಾಶ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ನಂಜುಂಡೇಗೌಡ, ಪದ್ಮಶ್ರೀ ಪುರಸ್ಕೃತರಾದ ರಾಣಿ ಮಾಚಯ್ಯ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜ್,
ಉಪ ಅರಣ್ಯ ಸಂರಕ್ಷಣಾಧಿಕಾರಿ ವನ್ಯಜೀವಿ ವಿಭಾಗದ ಶಿವರಾಂ ಬಾಬು, ಅಧಿಕಾರಿಗಳಾದ ಎ.ಟಿ.ಪೂವಯ್ಯ, ಬೇಬಿ ಮ್ಯಾಥ್ಯು ಪಾಲ್ಗೊಂಡಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಮೇಜರ್ ಡಾ. ಬಿ.ರಾಘ ವಹಿಸಿಕೊಂಡರು. ಎನ್.ಎಸ್.ಎಸ್ ಸಂಯೋಜನಾಧಿಕಾರಿ ಡಾ. ಎ.ಎನ್.ಗಾಯತ್ರಿ, ಉಪನ್ಯಾಸಕರಾದ ವಿಶಾಲ್, ಎನ್ ಎಸ್ ಎಸ್ ಮತ್ತು ಎನ್ ಸಿ ಸಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.









