ಮಡಿಕೇರಿ ಜು.2 : ಗೋಣಿಕೊಪ್ಪಲು ರೋಟರಿ ಸಂಸ್ಥೆಗೆ ವಿವಿಧ ಕಾಯ೯ಯೋಜನೆಗಳಿಗಾಗಿ ರೋಟರಿ ಜಿಲ್ಲೆಯಲ್ಲಿ ಪ್ಲಾಟಿನಂ ಪ್ಲಸ್ ಪ್ರಶಸ್ತಿ ದೊರಕಿದೆ. ಮಂಗಳೂರಿನಲ್ಲಿ ಆಯೋಜಿತ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಗೋಣಿಕೊಪ್ಪಲು ರೋಟರಿ ಕ್ಲಬ್ ಅಧ್ಯಕ್ಷೆ ಜೆ.ಕೆ.ಸುಭಾಷಿಣಿ, ಕಾಯ೯ದಶಿ೯ ಅರುಣ್ ತಮ್ಮಯ್ಯ ಮತ್ತು ಸದಸ್ಯರು ಜಿಲ್ಲಾ ರೋಟರಿ ಗವನ೯ರ್ ಆಗಿದ್ದ ಪ್ರಕಾಶ್ ಕಾರಂತ್ ಅವರಿಂದ ಪ್ರಶಸ್ತಿ ಸ್ವೀಕರಿಸಿದರು.
ಗೋಣಿಕೊಪ್ಪಲು ರೋಟರಿ ಸಂಸ್ಥೆಯು 2022-23 ನೇ ರೋಟರಿ ವಷ೯ದಲ್ಲಿ 78 ಯೋಜನೆಗಳನ್ನು ಯಶಸ್ವಿಯಾಗಿ ಕಾಯ೯ಗತಗೊಳಿಸಿತ್ತು. ಪಿರಿಯಾಪಟ್ಟಣದಲ್ಲಿ ಐಕಾನ್ ರೋಟರಿ ಕ್ಲಬ್ ಎಂಬ ಹೊಸ ರೋಟರಿ ಸಂಸ್ಥೆಯನ್ನೂ 54 ಸದಸ್ಯರಿಂದ ಪ್ರಾರಂಭಿಸಲಾಗಿತ್ತು. ಗೋಣಿಕೊಪ್ಪಲು ಸಕಾ೯ರಿ ಪ್ರಾಥಮಿಕ ಶಾಲೆಯ 435 ವಿದ್ಯಾಥಿ೯ಗಳಿಗೆ ಸಮವಸ್ತ್ರ ನೀಡಿಕೆ. ಕಳತ್ತಮಾಡು , ಹೊಸೂರು, ಪಾಲಿಬೆಟ್ಟ ಸಕಾ೯ರಿ ಶಾಲೆಗಳಿಗೆ ಟೇಬಲ್, ಚೇರ್, ಲ್ಯಾಪ್ ಟಾಪ್ ಸೇರಿದಂತೆ 3 ಲಕ್ಷ ಮೌಲ್ಯದ ಪೀಠೋಪಕರಣಗಳನ್ನು ನೀಡಲಾಗಿತ್ತು. ಅಂತೆಯೇ ಗೋಣಿಕೊಪ್ಪ ರೋಟರಿ ಕ್ಲಬ್ ಆಯೋಜಿಸಿದ್ದ ಆರೋಗ್ಯ ಸಿರಿ ಯೋಜನೆಯಡಿಯಲ್ಲಿ ರಕ್ತದಾನ ಶಿಬಿರ, ನೇತ್ರ ಚಿಕಿತ್ಸಾ ಶಿಬಿರಗಳೂ ಸಾವ೯ಜನಿಕರಿಗೆ ಪ್ರಯೋಜನಕಾರಿಯಾಗಿದ್ದವು. ನೇತ್ರ ಚಿಕಿತ್ಸಾ ಶಿಬಿರದಲ್ಲಿ 41 ಅಹ೯ರಿಗೆ ಉಚಿತವಾಗಿ ಕನ್ನಡಕ ನೀಡಲಾಗಿತ್ತು. ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ವಿದ್ಯಾಥಿ೯ಗಳು ಕಾಡು ಹಣ್ಣಿನ 1 ಲಕ್ಷ ಸಸಿಗಳನ್ನೂ ವನಸಿರಿ ಯೋಜನೆಯಡಿಯಲ್ಲಿ ನೆಟ್ಟಿದ್ದರು.
ಗೋಣಿಕೊಪ್ಪಲು ರೋಟರಿ ಸಂಸ್ಥೆಯು ಜಿಲ್ಲಾ ರೋಟರಿ ಯೋಜನೆಯಾದ ವಿದ್ಯಾಸಿರಿ, ವನಸಿರಿಯಲ್ಲಿ ಮಾಡಿದ ಗಣನೀಯ ಸಾಧನೆಯನ್ನೂ ಪ್ರಶಸ್ತಿಗಾಗಿ ಪರಿಗಣಿಸಲಾಗಿತ್ತು ಎಂದು ಸಂಸ್ಥೆಯ ಅಧ್ಯಕ್ಷೆಯಾಗಿದ್ದ ಜೆ.ಕೆ.ಸುಭಾಷಿಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.