ಗೋಣಿಕೊಪ್ಪ ಜು.2 : ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪ್ರಥಮ ವರ್ಷದ ಮಹಾಸಭೆ ಮತ್ತು ಪ್ರಶಸ್ತಿ ಪ್ರದಾನ ಹಾಗೂ ಸನ್ಮಾನ ಕಾರ್ಯಕ್ರಮ ಗೋಣಿಕೊಪ್ಪ ಕಕೂನ್ ಸಭಾಂಗಣದಲ್ಲಿ ನಡೆಯಿತು.
2022 ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಂಘದ ರಾಜ್ಯ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಅವರು ತಮ್ಮ ಸೋದರ ಮಾವಂದಿರಾದ ದೇಯಂಡ ಪೂಣಚ್ಚ ಹಾಗೂ ಉಮೇಶ್ ಜ್ಞಾಪಕಾರ್ಥದ ಅತ್ಯುತ್ತಮ ಗ್ರಾಮೀಣ ವರದಿ ಪ್ರಶಸ್ತಿ, ವಿರಾಜಪೇಟೆ ತಾಲೂಕು ಸಂಘದ ಅಧ್ಯಕ್ಷರಾಗಿದ್ದ ಸಣ್ಣುವಂಡ ಶ್ರೀನಿವಾಸ್ ಚಂಗಪ್ಪ ಅವರು ತಮ್ಮ ತಂದೆ ಸಣ್ಣುವಂಡ ಮಾದಪ್ಪ ಹಾಗೂ ತಾಯಿ ಜಾನಕಿ ಮಾದಪ್ಪ ಜ್ಞಾಪಕಾರ್ಥದ ಪರಿಸರ ಕುರಿತ ವರದಿ ಪ್ರಶಸ್ತಿಯನ್ನು ವಿಜಯ ಕರ್ನಾಟಕ ಪತ್ರಿಕೆ ವರದಿಗಾರ ಕೆ. ಬಿ. ಜಗದೀಶ್ ಜೋಡುಬೀಟಿ, ರಾಷ್ಟ್ರೀಯ ಸಮಿತಿ ಸದಸ್ಯರಾಗಿದ್ದ ಎಸ್. ಎ. ಮುರುಳಿಧರ್ ಅವರು ಸಹೋದರ ಗಣೇಶ್ ಜ್ಞಾಪಕಾರ್ಥದ ಅತ್ಯುತ್ತಮ ಕ್ರೀಡಾ ವರದಿ ಪ್ರಶಸ್ತಿಯನ್ನು ಶಕ್ತಿ ಪತ್ರಿಕೆ ವರದಿಗಾರ ಅಣ್ಣೀರ ಹರೀಶ್ ಮಾದಪ್ಪ ಸ್ವೀಕರಿಸಿದರು.
ರಾಜ್ಯ ಪ್ರಶಸ್ತಿ ಪಡೆದ ಕೆ. ಬಿ. ಜಗದೀಶ್ ಜೋಡುಬೀಟಿ, ಜಿಲ್ಲಾ ಪ್ರಶಸ್ತಿ ಪುರಸ್ಕೃತ ಎಚ್. ಕೆ. ಜಗದೀಶ್, ಇಂಡಿಯನ್ ಆಯಿಲ್ ಕಾರ್ಪೋರೇಷನ್ ಮೂಲಕ ಜಿಲ್ಲೆಯಲ್ಲಿ ಹೆಚ್ಚು ಇಂಧನ ಮಾರಾಟದೊಂದಿಗೆ ಉದ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಂಘದ ಉಪಾಧ್ಯಕ್ಷ ಮಚ್ಚಮಾಡ ಅನೀಶ್ ಮಾದಪ್ಪ ಅವರುಗಳನ್ನು ಸನ್ಮಾನಿಸಲಾಯಿತು.
ಮಹಾಸಭೆಯಲ್ಲಿ ಸಂಘದ ಕಾರ್ಯದರ್ಶಿ ಮಂಡೇಡ ಎಸ್. ಅಶೋಕ್ ವಾರ್ಷಿಕ ವರದಿ ವಾಚಿಸಿದರು. ಖಜಾಂಚಿ ವಿ. ವಿ. ಅರುಣ್‌ಕುಮಾರ್ ಲೆಕ್ಕಪತ್ರ ಮಂಡಿಸಿದರು.
ಸಂಘದ ರಾಜ್ಯ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಸದಸ್ಯರು ವೃತ್ತಿಯೊಂದಿಗೆ ಸಂಘ ಚಟುವಟಿಕೆಗೂ ತೊಡಗಿಕೊಳ್ಳುವ ಮೂಲಕ ಬೆಳವಣಿಗೆ ಕಂಡುಕೊಳ್ಳಬೇಕಿದೆ. ಸದಸ್ಯರ ಆರೋಗ್ಯ ಕಾಪಾಡಿಕೊಳ್ಳುವ ದೃಷ್ಠಿಯಲ್ಲಿ ಕಾರ್ಯಕ್ರಮ ರೂಪಿಸಬೇಕು ಎಂದು ಸಲಹೆ ನೀಡಿದರು.
ಸಂಘದ ಜಿಲ್ಲಾಧ್ಯಕ್ಷೆ ಬಿ. ಆರ್. ಸವಿತಾರೈ ಮಾತನಾಡಿ, ಸಂಘ ಸ್ಥಾಪನೆಗೊಂಡ ಹತ್ತು ತಿಂಗಳ ಅವಧಿಯಲ್ಲಿ 35 ಕಾರ್ಯಕ್ರಮಗಳ ಮೂಲಕ ಸಮಾಜಮುಖಿಯಾಗಿ ತೊಡಗಿಕೊಂಡಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಎಲ್ಲ ವರ್ಗದವರೊಂದಿಗೆ ಪತ್ರಕರ್ತರು ಪಾಲ್ಗೊಳ್ಳುವಂತ ಯೋಜನೆ ರೂಪಿಸಿರುವುದು ಉತ್ತಮ ಬೆಳವಣಿಗೆ. ಮಾದರಿ ಸಂಘವಾಗಿ ರೂಪುಗೊಂಡಿದೆ ಎಂದರು.
ಸಂಘದ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ, ವೀಕ್ಷಕಕರಾಗಿ ಜಿಲ್ಲಾ ಉಪಾಧ್ಯಕ್ಷ ಪಳೆಯಂಡ ಪಾರ್ಥ ಚಿಣ್ಣಪ್ಪ, ರಾಜ್ಯ ಸಮಿತಿ ಸದಸ್ಯ ಟಿ. ಎನ್. ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಎನ್. ಎನ್.ದಿನೇಶ್ ಭಾಗವಹಿಸಿದ್ದರು. ಎಂ. ಎಂ. ಚನ್ನನಾಯಕ ಪ್ರಾರ್ಥಿಸಿದರು. ಸಿಂಗಿ ಸತೀಶ್ ಸ್ವಾಗತಿಸಿದರು.











