ಮಡಿಕೇರಿ ಜು.4 : ಶಾಲಾ ಮಕ್ಕಳು ಶಿಸ್ತನ್ನು ಬೆಳೆಸಿಕೊಳ್ಳಬೇಕು. ಬಹಳ ಮುಖ್ಯವಾಗಿ ಶಾಲೆಯಲ್ಲಿ ಉತ್ತಮವಾಗಿ ಓದಬೇಕು ಮತ್ತು ಬಾಲ್ಯದಿಂದಲೇ ವಿವಿಧ ಕಲೆ, ಸಾಹಿತ್ಯದಲ್ಲಿ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ಪದ್ಮ ಶ್ರೀ ಪ್ರಶಸ್ತಿ ಪುರಸ್ಕೃತರಾದ ರಾಣಿ ಮಾಚಯ್ಯ ಹೇಳಿದರು.
ಅರಣ್ಯ ಇಲಾಖೆ ಮಡಿಕೇರಿ ಪ್ರಾದೇಶಿಕ ವಿಭಾಗ ಮತ್ತು ಸಾಮಾಜಿಕ ಅರಣ್ಯ ವಲಯ, ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಸಹಯೋಗದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಾಟೆಕಾಡುವಿನಲ್ಲಿ ನಡೆದ ‘ನನ್ನ ಗಿಡ, ನನ್ನ ಹೆಮ್ಮೆ’ ಶೀರ್ಷಿಕೆಯಡಿ ವನಮಹೋತ್ಸವ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಶಾಲೆಯು ಮಕ್ಕಳನ್ನು ಸೌಹಾರ್ಧರನ್ನಾಗಿ ಬೆಳೆಸಲು ಪೂರಕವಾಗಿದೆ. ಮಕ್ಕಳು ಪೋಷಕರಿಗೆ ಸಮಾಜಕ್ಕೆ ಉತ್ತಮ ವ್ಯಕ್ತಿಗಳಾಗಿ ನಿಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದು ಆಶಯಿಸಿದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಜಿಲ್ಲಾ ಉಪನಿರ್ದೇಶಕರ ಕಚೇರಿಯ ಡಿವೈಪಿಸಿ ಸೌಮ್ಯ ಮಾತನಾಡಿ, ಶಾಲಾ ಮಕ್ಕಳು ಪರಿಸರದ ಕಾಳಜಿಯನ್ನು ವೃದ್ಧಿಸಿಕೊಳ್ಳಬೇಕು ಮನೆಗಳಲ್ಲಿ ಸಸಿಗಳನ್ನು ನೆಟ್ಟು ಬೆಳೆಸಬೇಕು. ಪರಿಸರದ ಮೇಲಿನ ಕಾಳಜಿಯು ನಿರಂತರವಾಗಿರಬೇಕು ಅದು ಉತ್ತಮ ಆರೋಗ್ಯವನ್ನು ನೀಡುತ್ತದೆ. ಸಸಿಯನ್ನು ಪೋಷಿಸಿದರೆ ಭವಿಷ್ಯಕ್ಕೆ ನಿಮ್ಮ ಕೊಡುಗೆಯಾಗಿರುತ್ತದೆ ಎಂದು ತಿಳಿಸಿದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಜಿಲ್ಲಾ ಉಪನಿರ್ದೇಶಕರ ಕಚೇರಿಯ ವಿಷಯ ಪರಿವೀಕ್ಷಕರಾದ ಬಿಂದು ಮಾತನಾಡಿ, ಕೊಡಗಿನಲ್ಲಿ 44 ಭೂಕುಸಿತ ಪ್ರದೇಶವೆಂದು ಗುರುತಿಸಿದ್ದಾರೆ. ಶಾಲಾ ಮಕ್ಕಳು ಪರಿಸರದ ಕಾಳಜಿಯನ್ನು ಬೆಳೆಸಿಕೊಂಡು ಪ್ರತಿಯೊಬ್ಬರು ಒಂದೊಂದು ಗಿಡವನ್ನು ಬೆಳೆಸಿದರೆ ನೈಸರ್ಗಿಕ ವಿಪತ್ತನ್ನು ತಡೆಗಟ್ಟಬಹುದು. ಇದರಿಂದ ಅರಣ್ಯ ಸಂಪತ್ತು ಹೆಚ್ಚಾಗುತ್ತದೆ ಎಂದು ಆಶಯ ವ್ಯಕ್ತಪಡಿಸಿದರು.
ಹೊದ್ದೂರು ಗ್ರಾ.ಪಂ ಸದಸ್ಯ ಕೆ. ಮೊಣ್ಣಪ್ಪ ಮಾತನಾಡಿ, ಪೋಷಕರು ನಿಮ್ಮನ್ನು ಹೇಗೆ ಉತ್ತಮವಾಗಿ ಬೆಳೆಸಿದ್ದಾರೆ ಅಂತೆಯೇ ನೀವೂ ಕೂಡ ಸಸಿಗಳನ್ನು ನೆಟ್ಟು ಬೆಳೆಸಬೇಕು. ಭವಿಷ್ಯದಲ್ಲಿ ಅದು ನಿಮ್ಮ ಬಾಲ್ಯವನ್ನು ನೆನೆಸುತ್ತದೆ ಪರಿಸರವನ್ನು ಪೋಷಿಸಿ ಅದು ನಿಮ್ಮನ್ನು ರಕ್ಷಿಸುತ್ತದೆ. ನಾನು ಕೂಡ ಬಾಲ್ಯದಲ್ಲಿ ಶಾಲೆಯಲ್ಲಿ ಗಿಡವನ್ನು ನೆಟ್ಟು ಇಂದಿಗೂ ಕೂಡ ಆ ಮರಗಳನ್ನು ನೋಡಿಕೊಂಡು ಬರುತ್ತಿದ್ದೇನೆ ಎಂದು ಬಾಲ್ಯವನ್ನು ನೆನೆದು ವಿದ್ಯಾರ್ಥಿಗಳಿಗೆ ಕಿವಿಮಾತನ್ನಾಡಿದರು.
ಗ್ರಾ.ಪಂ ಅಧ್ಯಕ್ಷರಾದ ಕುಸುಮಾವತಿ ಆನಂದ್ ಮಾತನಾಡಿ, ಮಕ್ಕಳನ್ನು ಸಮಾಜಕ್ಕೆ ಉತ್ತಮ ಪ್ರಜೆಗಳಾಗಿ ಬೆಳೆಸುವ ವಾತಾವರಣ ಶಾಲೆಯಾಗಿದೆ. ಪರಿಸರವನ್ನು ಪ್ರೀತಿಸಿ ಪೋಷಿಸುವ ಜವಾಬ್ದಾರಿಯನ್ನು ಬೆಳೆಸಿಕೊಳ್ಳಬೇಕು ಎಂದು ಅಧ್ಯಕ್ಷೀಯ ನುಡಿಗಳನ್ನಾಡಿದರು.
ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಪ್ರಧಾನ ಆಯುಕ್ತರಾದ ಬೇಬಿ ಮ್ಯಾಥ್ಯೂ, ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ಧನಂಜಯ್, ಶಾಲೆಯ ಮುಖ್ಯೋಪಾಧ್ಯಾಯರಾದ ದಮಯಂತಿ, ವಾಟೆಕಾಡು ಸಸ್ಯಕ್ಷೇತ್ರದ ವಲಯ ಅರಣ್ಯಾಧಿಕಾರಿ ಮಯೂರ್ ಕಾರ್ವೇಕರ್, ಉಪ ವಲಯ ಅರಣ್ಯಾಧಿಕಾರಿ ಮಲ್ಲಯ್ಯ, ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಘಟಕರಾದ ದಮಯಂತಿ, ಕಾರ್ಯದರ್ಶಿ ವಸಂತಿ, ಪತ್ರಕರ್ತರು ಮತ್ತು ಸಹಕಾರ್ಯದರ್ಶಿ ಬೊಳ್ಳಜಿರ ಬಿ.ಅಯ್ಯಪ್ಪ , ಸಿ ಆರ್ ಪಿ ಉಷಾ, ವಲಯ ಅರಣ್ಯ ಇಲಾಖೆಯ ಸಿಬ್ಬಂದಿಗಳು, ಶಾಲೆಯ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.
ಕಾರ್ಯಕ್ರಮದಲ್ಲಿ ರಾಣಿ ಮಾಚಯ್ಯ ಅವರನ್ನು ಸನ್ಮಾನಿಸಲಾಯಿತು ಮತ್ತು ಮಕ್ಕಳಿಗೆ ಸಸಿಗಳನ್ನು ವಿತರಿಸಲಾಯಿತು. ಪರಿಸರ ಸಂರಕ್ಷಣೆಯ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು. ವಾಟೆಕಾಡು ಶಾಲೆಯ ಸಹ ಶಿಕ್ಷಕ ಟಿ.ಬಿ.ಕುಮಾರಸ್ವಾಮಿ ಸ್ವಾಗತಿಸಿದರು. ಸೌಮ್ಯ ವಂದಿಸಿದರು.