ಮಡಿಕೇರಿ ಜು.4 : ನಾಪೋಕ್ಲು ಪೊಲೀಸ್ ಠಾಣಾ ಸರಹದ್ದಿನ ಕೊಟ್ಟಮುಡಿ ಜಂಕ್ಷನ್ ಬಳಿ ಅಕ್ರಮವಾಗಿ ಮಾದಕ ವಸ್ತುಗಳನ್ನು ಮಾರಾಟ ಮಾಡುತಿದ್ದ ಇಬ್ಬರು ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಕೊಡಗು ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಕೊಟ್ಟಮುಡಿ ಬಸ್ ನಿಲ್ದಾಣದ ಬಳಿ ಮಾದಕ ವಸ್ತು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನೆಲೆ ದಾಳಿ ನಡೆಸಿದ ಪೊಲೀಸರು ಮಡಿಕೇರಿ ನಿವಾಸಿಗಳಾದ ಮೊಹಮ್ಮದ್ ಹ್ಯಾರಿಸ್ (40) ಹಾಗೂ ಹ್ಯಾರಿಸ್ (37) ಎಂಬುವವರನ್ನು ಬಂಧಿಸಿದ್ದಾರೆ. ಇವರ ಬಳಿಯಿಂದ 225 ಗ್ರಾಂ ಗಾಂಜಾ ಮತ್ತು 4 ಗ್ರಾಂ ನಿಷೇಧಿತ ಮಾದಕ ವಸ್ತು ಎಂಡಿಎಂಎ ಯನ್ನು ವಶಪಡಿಸಿಕೊಂಡಿದ್ದಾರೆ.
ಮಡಿಕೇರಿ ಉಪ ವಿಭಾಗದ ಡಿವೈಎಸ್‌ಪಿ ಎಂ.ಜಗದೀಶ್, ಗ್ರಾಮಾಂತರ ವೃತ್ತದ ಸಿಪಿಐ ಅನೂಪ್ ಮಾದಪ್ಪ, ನಾಪೋಕ್ಲು ಪಿಎಸ್‌ಐ ಈ.ಮಂಜುನಾಥ ಹಾಗೂ ಸಿಬ್ಬಂದಿಗಳ ವಿಶೇಷ ತಂಡ ದಾಳಿ ನಡೆಸಿತು. ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕಾರ್ಯದಕ್ಷತೆಯನ್ನು ಶ್ಲಾಘಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಮಾದಕ ವಸ್ತು ಮಾರಾಟದ ಕುರಿತು ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಮಾಹಿತಿ ನೀಡಿದವರ ಹೆಸರನ್ನು ಬಹಿರಂಗಪಡಿಸುವುದಿಲ್ಲವೆಂದು ಅವರು ಹೇಳಿದ್ದಾರೆ.








