ಮಡಿಕೇರಿ, NEWS DESK ಅ. 12: ಚೇರಂಬಾಣೆಯ ಬೇಂಗ್ ನಾಡ್ ಕೊಡವ ಸಮಾಜದ ವತಿಯಿಂದ ಕೈಲ್ ಪೋದ್ ಒತ್ತೋರ್ಮೆ ಕೂಟವನ್ನು ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಆಯೋಜಿಸಲಾಗಿದ್ದ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯನ್ನು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯ ನಾಪಂಡ ಗಣೇಶ್ ಅವರು ತೆಂಗಿನಕಾಯಿಗೆ ಗುಂಡು ಹೊಡೆಯುವ ಮೂಲಕ ಉದ್ಘಾಟಿಸಿದರು. ಬಳಿಕ ವಿವಿಧ ಆಟೋಟ ಸ್ಪರ್ಧೆಗಳು ನಡೆದವು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಬೆಂಗಳೂರಿನ ಉದ್ಯಮಿ ಹಾಗೂ ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಚಿರಿಯಪಂಡ ಸುರೇಶ್ ನಂಜಪ್ಪ ಅವರು, ಕೊಡವ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಉಳಿಸಿ ಬೆಳೆಸುವುದರ ಜೊತೆಗೆ ಮಕ್ಕಳಿಗೂ ಅವುಗಳ ಮಹತ್ವವನ್ನು ತಿಳಿಸಿಕೊಡುವ ಮೂಲಕ ಮುಂದಿನ ಪೀಳಿಗೆಗೆ ಪರಿಚಯಿಸಬೇಕು ಎಂದು ಕರೆ ನೀಡಿದರು.
ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ತಾವು ಕೈಗೊಂಡಿರುವ ವಿವಿಧ ಸಾಮಾಜಿಕ ಕಾರ್ಯಗಳು ಹಾಗೂ ಕಾರ್ಯಕ್ರಮಗಳ ಕುರಿತು ಅವರು ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೇಂಗ್ ನಾಡ್ ಕೊಡವ ಸಮಾಜದ ಅಧ್ಯಕ್ಷ ಬಾಚರಣಿಯಂಡ ದಿನೇಶ್ ಗಣಪತಿ ಅವರು ಮಾತನಾಡಿ, ಸಮಾಜದ ಕಾರ್ಯಚಟುವಟಿಕೆಗಳ ಕುರಿತು ವಿವರಿಸಿದರು. ಫೆಡರೇಷನ್ ಆಫ್ ಕೊಡವ ಸಮಾಜದ ಕ್ರೀಡಾ ವಿಭಾಗದ ಸಂಚಾಲಕ ಕಂಬಿರಂಡ ಕಿಟ್ಟು ಅವರು ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ವೇದಿಕೆಯಲ್ಲಿ ಸಮಾಜದ ಉಪಾಧ್ಯಕ್ಷ ಪಟ್ಟಮಾಡ ಪೊನ್ನಪ್ಪ ಹಾಗೂ ಕಾರ್ಯದರ್ಶಿ ಕೇಕಡ ಮೊಣ್ಣಪ್ಪ ಉಪಸ್ಥಿತರಿದ್ದರು.
ಪಟ್ಟಮಾಡ ವರುಣಿಕ ಪೊನ್ನಮ್ಮ ಪ್ರಾರ್ಥಿಸಿದರು. ಸಮಾಜದ ಕಾರ್ಯದರ್ಶಿ ಕೇಕಡ ರೋಮಿ ಮೊಣ್ಣಪ್ಪ ಸ್ವಾಗತಿಸಿದರು. ಜಂಟಿ ಕಾರ್ಯದರ್ಶಿ ಬಡ್ಡಿರ ನಳಿನಿ ಪೂವಯ್ಯ ಅತಿಥಿಗಳನ್ನು ಪರಿಚಯಿಸಿದರು. ತೇಲಪಂಡ ಲಕ್ಷ್ಮಿ ಪೆಮ್ಮಯ್ಯ ಕಾರ್ಯಕ್ರಮ ನಿರೂಪಿಸಿದರು. ಸಮಾಜದ ಖಜಾಂಚಿ ಬೋಪ್ಪಡತಂಡ ಕಿಶೋರ್ ವಂದಿಸಿದರು.
ವಿವಿಧ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಕೊಡವ ಸಮಾಜದ ಆಡಳಿತ ಮಂಡಳಿ ಹಾಗೂ ಸದಸ್ಯರು, ಕೊಡವ ಸಮಾಜ ಪೊಮ್ಮಕ್ಕಡ ಕೂಟದ ಆಡಳಿತ ಮಂಡಳಿ ಮತ್ತು ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಫೋಟೋ ಶೀರ್ಷಿಕೆ: ಚೇರಂಬಾಣೆಯ ಬೇಂಗ್ ನಾಡ್ ಕೊಡವ ಸಮಾಜದ ವತಿಯಿಂದ ನಡೆದ ಕೈಲ್ ಪೋದ್ ಒತ್ತೋರ್ಮೆ ಕೂಟದಲ್ಲಿ ಗಣ್ಯರು ಹಾಗೂ ಸಮಾಜದ ಸದಸ್ಯರು ಉಪಸ್ಥಿತರಿದ್ದರು.

















