ನಾಪೋಕ್ಲು ಜು.5 : ಮರಂದೋಡ ಗ್ರಾಮದಲ್ಲಿ ಕಾಡಾನೆಗಳ ಉಪಟಳ ದಿಂದ ಗ್ರಾಮಸ್ಥರು ನಲುಗುವಂತಾಗಿದೆ. ಕಳೆದ ಕೆಲವು ದಿನಗಳಿಂದ ಗ್ರಾಮದಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳು ತೋಟಗಳಿಗೆ ನುಗ್ಗಿ ಕಾಫಿ, ಅಡಿಕೆ, ತೆಂಗು, ಬಾಳೆ, ಅನಾನಾಸು ಗಿಡಗಳನ್ನು ಧ್ವಂಸ ಪಡಿಸುತ್ತಿವೆ ಎಂದು ಗ್ರಾಮಸ್ಥರು ಅವಲತ್ತುಕೊಂಡಿದ್ದಾರೆ.
ಮರಂದೋಡ ಗ್ರಾಮದ ಹಲವು ತೋಟಗಳಿಗೆ ನುಗ್ಗಿರುವ ಕಾಡಾನೆಗಳು ಕಾಫಿ, ಬಾಳೆ ಗಿಡಗಳನ್ನು ದ್ವಂಸಪಡಿಸಿ ರಸ್ತೆಗಳಲ್ಲಿ ಎಳೆದೊಯ್ದಿರುವ ದೃಶ್ಯಗಳು ಕಂಡುಬಂದಿವೆ. ಗ್ರಾಮದ ಚೋಯಮಾಡಂಡ ಪೂರ್ಣಚ್ಚ ಅವರ ಮನೆಯ ಬಳಿ ಅಡ್ಡಾಡಿ ಕಿಟಕಿ ಒಳಗಿನಿಂದ ಮಕ್ಕಳ ಸಮವಸ್ತ್ರವನ್ನು ಕಿತ್ತು ಎಸೆದು ತುಳಿದಿರುವುದಾಗಿ ಪೂಣಚ್ಚ ತಿಳಿಸಿದರು. ಇದರಿಂದಾಗಿ ಸಂಜೆ ಕತ್ತಲಾಗುತ್ತಿದ್ದಂತೆ ರಸ್ತೆ ಹಾಗೂ ಗ್ರಾಮದ ದಾರಿಗಳಲ್ಲಿ ಅಡ್ಡಾಡುವ ಕಾಡಾನೆಗಳಿಂದ ಕಾರ್ಮಿಕರು ಶಾಲಾ ವಿದ್ಯಾರ್ಥಿಗಳು ಗ್ರಾಮಸ್ಥರು, ಮನೆಗಳಿಂದ ಹೊರಗೆ ಬರಲು ಜೀವ ಭಯದಿಂದ ತತ್ತರಿಸಿ ಕಂಗಲಾಗಿದ್ದಾರೆ.
ಭತ್ತದ ಬಿತ್ತನೆಗಾಗಿ ಗದ್ದೆಗಳನ್ನು ಸಿದ್ಧಪಡಿಸಲಾಗಿದ್ದು ಬಿತ್ತನೆಗೂ ಮುನ್ನವೇ ಆನೆಗಳು ಗದ್ದೆಗಳಲ್ಲಿ ಅಡ್ಡಾಡಿವೆ.ಬಿತ್ತನೆ ಮುಗಿದ ನಂತರ ಮತ್ತೆ ಕಾಡಾನೆಗಳು ಪೈರುಗಳನ್ನು ಧ್ವಂಸ ಮಾಡುವ ಆತಂಕವಿದ್ದು ಭತ್ತದ ಕೃಷಿ ಮಾಡುವುದು ಸಹ ಅಸಾಧ್ಯವಾಗಿದೆ ಎಂದು ಚೋಯಮಾಡಂಡ ಹರೀಶ್ ಹಾಗೂ ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ. ಕೂಡಲೇ ಜನಪ್ರತಿನಿಧಿಗಳು ಹಾಗೂ ಅರಣ್ಯ ಇಲಾಖೆ, ಸರಕಾರ ಸೂಕ್ತ ಕ್ರಮ ಕೈಗೊಂಡು ರೈತರಿಗೆ ಬೆಲೆ ನಷ್ಟ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ .
ವರದಿ : ದುಗ್ಗಳ ಸದಾನಂದ