ನಾಪೋಕ್ಲು ಜು.7 : ಕಾವೇರಿ ನದಿಯ ಉಗಮ ಸ್ಥಾನ ತಲಕಾವೇರಿ ಭಾಗಮಂಡಲ ಸೇರಿದಂತೆ ಕಾವೇರಿ ನದಿಯ ತಪ್ಪಲಿನಲ್ಲಿ ಕಳೆದ ಎರಡು ದಿನಗಳಿಂದ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನಾಪೋಕ್ಲು ಬಳಿಯ ಕಾವೇರಿ ನದಿಯ ನೀರಿನ ಮಟ್ಟದಲ್ಲಿ ಏರಿಕೆ ಕಂಡು ಬಂದಿದೆ.
ನಾಪೋಕ್ಲು ವಿಭಾಗದಲ್ಲಿ ಮಳೆಯ ಆರ್ಭಟ ಜೋರಾಗಿದ್ದು, ಅಲ್ಲಲ್ಲಿ ಸಣ್ಣ ಪ್ರಮಾಣದಲ್ಲಿ ಬರೆಕುಸಿತ ಮತ್ತು ಕೆಲವೆಡೆ ತೋಟಗಳಲ್ಲಿ ಮರದ ಕೊಂಬೆಗಳು ಬಿದ್ದು ವಿದ್ಯುತ್ ಪೂರೈಕೆಯಲ್ಲಿ ವ್ಯತೆಯ ಕೂಡ ಉಂಟಾಗಿದೆ.
ಸಮೀಪದ ಬಲಮುರಿ ಗ್ರಾಮದಲ್ಲಿರುವ ಸಣ್ಣ ಸೇತುವೆ ಕಾವೇರಿ ನದಿ ಪ್ರವಾಹದಿಂದ ಮುಳುಗಡೆಯಾಗಿದೆ. ಅದರಂತೆ ಕೊಳಕೇರಿ ಗ್ರಾಮದಲ್ಲಿರುವ ಚಪ್ಪೆಂಡಡಿ ಸರ್ಕಾರಿ ಪ್ರಾಥಮಿಕ ಶಾಲೆಗೆ ತೆರಳುವ ರಸ್ತೆಯ ಬದಿಯಲ್ಲಿರುವ ಬರೆ ಕುಸಿದಿದ್ದು ಪಕ್ಕದಲ್ಲಿರುವ ವಿದ್ಯುತ್ ಕಂಬ ಬೀಳುವ ಸ್ಥಿತಿಯಲ್ಲಿದೆ.
ನಾಪೋಕ್ಲು ಸುತ್ತಮುತ್ತಲಿನ ಎಮ್ಮೆಮಾಡು, ನೆಲಜಿ, ಬಲ್ಲಮಾವಟಿ, ಕೊಳಕೇರಿ ಚೆರಿಯಪರಂಬು, ಕೈಕಾಡು, ಹೊದವಾಡ ಸೇರಿದಂತೆ ವ್ಯಾಪ್ತಿಯ ಎಲ್ಲಾ ಗ್ರಾಮಳಲ್ಲಿರುವ ಹೊಳೆ,ತೊರೆ, ಹಳ್ಳ ಕೊಳ್ಳೆಗಳಲ್ಲಿ ನೀರು ತುಂಬಿ ಹರಿಯುತ್ತಿದೆ.
ವರದಿ :ಝಕರಿಯ ನಾಪೋಕ್ಲು