ಮಡಿಕೇರಿ ಜು.7 : ನಿಷೇಧಿತ ಕೇರಳದ ಲಾಟರಿ ಯನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ನಾಪೋಕ್ಲು ಪೊಲೀಸರು ಬಂಧಿಸಿದ್ದಾರೆ.
ವಿರಾಜಪೇಟೆ ನೆಹರು ನಗರದ ನಿವಾಸಿ ಗಪೂರ್ ಬಂಧಿತ ವ್ಯಕ್ತಿ. ನಾಪೋಕ್ಲು ಸಮೀಪದ ಹಳೆತಾಲೂಕುವಿನಲ್ಲಿರುವ ಗ್ಯಾರೇಜ್ ಒಂದರ ಮುಂಭಾಗದಲ್ಲಿ ಅಕ್ರಮವಾಗಿ ನಿಷೇಧಿತ ಕೇರಳರಾಜ್ಯದ ಲಾಟರಿ ಮಾರಾಟ ಮಾಡುತ್ತಿರುವ ಬಗ್ಗೆ ಲಭಿಸಿದ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ವಿವಿಧ ಶ್ರೇಣಿಯ 1,520 ರೂ.ಮೌಲ್ಯದ 38 ಕೇರಳರಾಜ್ಯದ ಲಾಟರಿ ಮತ್ತು ಮಾರಾಟ ಮಾಡಿದ 370 ರೂಗಳೊಂದಿಗೆ ಆರೋಪಿಯನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ರಾಮರಾಜನ್, ಹೆಚ್ಚುವರಿ ಪೊಲೀಸ್ ಉಪಅಧೀಕ್ಷಕ ಸುಂದರ್ ರಾಜ್ ನಿರ್ದೇಶನದಂತೆ, ಉಪ ವಿಭಾಗದ ಡಿವೈಎಸ್ಪಿ ಜಗದೀಶ್, ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ನಾಪೋಕ್ಲು ಠಾಣಾಧಿಕಾರಿ ಮಂಜುನಾಥ್ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ವರದಿ :ಝಕರಿಯ ನಾಪೋಕ್ಲು