ಮಡಿಕೇರಿ ಜು.7 : ಕೊಡಗು ಜಿಲ್ಲೆಯ ನೂತನ ಜಿಲ್ಲಾಧಿಕಾರಿ ವೆಂಕಟರಾಟ್ ರಾಜಾ ಅವರನ್ನು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಭೇಟಿಯಾಗಿ ಅಭಿನಂದಿಸಿದರು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್, ಕನ್ನಡ ಶಲ್ಯವನ್ನು ಮತ್ತು ಕನ್ನಡದ ಪುಸ್ತಕವನ್ನು ಜಿಲ್ಲಾಧಿಕಾರಿಗೆ ನೀಡುವ ಮೂಲಕ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳಿಗೆ ಸಹಕಾರ ಕೋರಿದರು.
ಈ ಸಂದರ್ಭ ಮಾತನಾಡಿದ ಜಿಲ್ಲಾಧಿಕಾರಿಗಳು 81ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಶ್ರವಣಬೆಳಗೊಳದಲ್ಲಿ ನಡೆದ ಸಂದರ್ಭದಲ್ಲಿ ತಾವು ಸಕ್ರಿಯವಾಗಿ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದನ್ನು ನೆನಪಿಸಿಕೊಂಡಿದ್ದಲ್ಲದೆ ಕನ್ನಡದ ಎಲ್ಲಾ ಕಾರ್ಯಕ್ರಮಗಳಿಗೆ ತಮ್ಮ ಸಹಕಾರ ಇರುವುದಾಗಿ ತಿಳಿಸಿದರು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್, ಗೌರವ ಕಾರ್ಯದರ್ಶಿಎಸ್.ಐ ಮುನಿರ್ ಅಹ್ಮದ್ ಮತ್ತು ಶ್ರೀಮತಿ ರೇವತಿ ರಮೇಶ್ ಉಪಸ್ಥಿತರಿದ್ದರು.