ಬೆಂಗಳೂರು: ನಾನು ಪೂರ್ಣ ಪ್ರಮಾಣದ 3,27,747 ಕೋಟಿ ರೂಪಾಯಿ ಗಾತ್ರದ ಬಜೆಟ್ ಮಂಡಿಸಿದ್ದೇನೆ. ಇದು ನಮ್ಮ ಗ್ಯಾರಂಟಿ ಬಜೆಟ್. ನಾವು ಕೊಟ್ಟ ಮಾತಿನಂತೆ 5 ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ವಿಧಾನಸಭೆಯಲ್ಲಿ 2023-24ನೇ ಸಾಲಿನ ಬಜೆಟ್ ಮಂಡಿಸಿದ ಬಳಿಕ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಿಎಂ, ಚುನಾವಣಾ ಪೂರ್ವದಲ್ಲಿ ನಾವು ನೀಡಿದ್ದ 5 ಗ್ಯಾರೆಂಟಿಗಳಿಗೆ ಅನುದಾನ ಒದಗಿಸುವ ಮೂಲಕ ನುಡಿದಂತೆ ನಡೆದಿದ್ದೇವೆ. ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸುವ ಸಮತೋಲಿತ ಹಾಗೂ ದೂರದೃಷ್ಟಿಯ ಬಜೆಟ್ ಅನ್ನು ನಾಡಿನ ಜನತೆಗೆ ಅರ್ಪಿಸುತ್ತಿದ್ದೇನೆ ಎಂದರು.
ಬಜೆಟ್ನಲ್ಲೂ 5 ಗ್ಯಾರಂಟಿ ಯೋಜನೆಗಳಿಗೆ ಹಣ ಒದಗಿಸಿದ್ದೇವೆ. ರಾಜ್ಯ ಆರ್ಥಿಕವಾಗಿ ದಿವಾಳಿ ಆಗದಂತೆ ನೋಡಿಕೊಂಡಿದ್ದೇವೆ. 1.30 ಕೋಟಿ ಕುಟುಂಬದ ಯಜಮಾನಿಗೆ ‘ಗೃಹಲಕ್ಷ್ಮೀ’ ಹಣ ನೀಡುತ್ತೇವೆ. ಜುಲೈ 16ರಿಂದ ಗೃಹಲಕ್ಷ್ಮೀ ಯೋಜನೆಗೆ ನೋಂದಣಿ ಪ್ರಾರಂಭವಾಗಲಿದೆ. ಆಗಸ್ಟ್ನಿಂದ ಮನೆ ಯಜಮಾನಿ ಖಾತೆಗೆ 2 ಸಾವಿರ ರೂ. ಹಾಕುತ್ತೇವೆ. ಆಗಸ್ಟ್ 15 ಅಥವಾ 16ರಂದು ಮನೆ ಯಜಮಾನಿ ಖಾತೆಗೆ ಹಣ ಹಾಕಲಾಗುವುದು ಎಂದರು.