ಮಡಿಕೇರಿ ಜು.9 : ವಿರಾಜಪೇಟೆ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಅವರು ತಮ್ಮ 49 ನೇ ಜನ್ಮದಿನವನ್ನು ಶಾಲಾ ಮಕ್ಕಳೊಂದಿಗೆ ಸಂಭ್ರಮದಿಂದ ಆಚರಿಸಿದರು. ಕಾವೇರಿಯ ಉಗಮಸ್ಥಾನ ತಲಕಾವೇರಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ಶಾಸಕರು, ಸಸಿ ನೆಡುವ ಮೂಲಕ ಪರಿಸರ ಕಾಳಜಿ ಮೆರೆದರು.
ಪತ್ನಿ ಕಾಂಚನ ಹಾಗೂ ಕುಟುಂಬದ ಸದಸ್ಯರೊಂದಿಗೆ ಭಾಗಮಂಡಲದ ಶ್ರೀಭಗಂಡೇಶ್ವರ ದೇವಾಲಯ ಮತ್ತು ತಲಕಾವೇರಿಯಲ್ಲಿ ಪೂಜೆ ಸಲ್ಲಿಸಿದ ಪೊನ್ನಣ್ಣ, ದೇವಸ್ಥಾನದ ತಪ್ಪಲಿನಲ್ಲಿ ಅರಣ್ಯ ಇಲಾಖೆಯ ಸಹಕಾರದೊಂದಿಗೆ ಸಸಿ ನೆಟ್ಟರು. ನಂತರ ಕೈಲಾಸ ಆಶ್ರಮಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು.
::: ಮಕ್ಕಳೊಂದಿಗೆ ಸಂಭ್ರಮ :::
ಭಾಗಮಂಡಲದ ಕೋರಂಗಾಲ ಗ್ರಾಮದ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯಲ್ಲಿ 550 ಕ್ಕೂ ಅಧಿಕ ಬಡಮಕ್ಕಳು, ಅಧ್ಯಾಪಕ ವೃಂದ, ಪೋಷಕರು ಹಾಗೂ ಸ್ಥಳೀಯ ಮುಖಂಡರ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಿದರು.
ವಸತಿ ಶಾಲೆಯ ಕುಂದುಕೊರತೆಗಳ ಬಗ್ಗೆ ಚರ್ಚಿಸಿದ ಶಾಸಕರು ಅಗತ್ಯ ಸಹಕಾರ ನೀಡುವ ಭರವಸೆ ನೀಡಿದರು.
ವಸತಿ ಶಾಲೆಯಲ್ಲಿ ಆಗಬೇಕಾದ ಅಭಿವೃದ್ಧಿ ಕಾರ್ಯಗಳ ಪಟ್ಟಿಯನ್ನು ಪ್ರಾಂಶುಪಾಲ ಲೋಕೇಶ್ ಅವರು ಪೊನ್ನಣ್ಣ ಅವರಿಗೆ ನೀಡಿದರು. ಇದೇ ಸಂದರ್ಭ 2022-23ನೇ ಸಾಲಿನಲ್ಲಿ ಪ್ರೌಢಶಾಲೆ ಮತ್ತು ಕಾಲೇಜ್ ನಲ್ಲಿ ಶೇ.100 ರಷ್ಟು ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ, ಶ್ರಮಿಸಿದ ಶಿಕ್ಷಕ ವೃಂದ ಹಾಗೂ ಪ್ರಾಂಶುಪಾಲರಿಗೆ ಅಭಿನಂದಿಸಿ ಗೌರವಿಸಲಾಯಿತು.
ಹಿರಿಯ ಮುಖಂಡರಾದ ಸಂಕೇತ್ ಪೂವಯ್ಯ, ಬೇಕಲ್ ರಮಾನಾಥ್, ಇಸ್ಮಾಯಿಲ್, ಸುನೀಲ್ ಪತ್ರವೋ, ದೇವಗೋಂಡಿ ಹರ್ಷ, ಹಾರಿಸ್ ಪದಕಲ್ , ಕುಯ್ಯಿಮುಡಿ ಮನೋಜ್ ಕುಮಾರ್, ದೇವಗೋಂಡಿ ತಿಲಕ ಸುಬ್ರಾಯ, ಅಬ್ದುಲ್ ಲತೀಫ್, ಕೆದಂಬಾಡಿ ಸುರೇಂದ್ರ, ಪಂಚಾಯತಿ ಉಪಾಧ್ಯಕ್ಷ ವಿಶು ಪ್ರವೀಣ್ ಕುಮಾರ್, ಕೆ.ಟಿ.ರಮೇಶ್, ಕೆ.ಎಂ.ಹರೀಶ್, ಮಂಗೇರಿರ ಜಗದೀಶ್, ಮಂದೋಡಿ ಶಿವಕುಮಾರ್, ಕೀರ್ತಿ ಉತ್ತಪ್ಪ, ಮುಕ್ಕಾಟಿ ಗಣೇಶ್, ಬಶೀರ್ ಚೇರಂಬಾಣೆ, ನಿಡ್ಯಮಲೆ ದಾಮೋದರ, ಶರತ್ ಭಾಗಮಂಡಲ, ಬಶೀರ್, ನೌಫಲ್, ಶಬರೀಶ್.ಕೆ, ಸಾಬು ತಿಮ್ಮಯ್ಯ, ಬಿ.ಎನ್.ರಂಗಪ್ಪ, ಬಾಲಚಂದ್ರ ನಾಯರ್ ಕರಿಕೆ, ದೇವಂಗೋಡಿ ಯೋಗೇಂದ್ರ, ವಿಶ್ವಪಾಲ, ಅಶೋಕ, ಪೋಷಕರು, ಗ್ರಾಮಸ್ಥರು ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.
ಪ್ರಾಂಶುಪಾಲ ಲೋಕೇಶ್ ಸ್ವಾಗತಿಸಿ, ಶಿಕ್ಷಕ ರಘು ನಿರೂಪಿಸಿ, ವಿಜ್ಞಾನ ಶಿಕ್ಷಕ ರೋಹಿತ್ ವಂದಿಸಿದರು. ಸಮಾಜ ವಿಜ್ಞಾನ ಶಿಕ್ಷಕ ಪ್ರವೀಣ್ ಪೂಜಾರಿ ವರದಿ ವಾಚಿಸಿದರು.











