ನಾಪೋಕ್ಲು ಜು.9 : ನಾಪೋಕ್ಲು ಸಮೀಪದ ಚೆಯ್ಯಂಡಾಣೆ ನರಿಯಂಡಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮದಲ್ಲಿ ಕಾಡಾನೆಗಳ ಉಪಟಳ ದಿಂದ ಗ್ರಾಮಸ್ಥರು ನಲುಗುವಂತಾಗಿದೆ. ಕಳೆದ ಕೆಲವು ದಿನಗಳಿಂದ ಗ್ರಾಮದಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳು ತೋಟಗಳಿಗೆ ನುಗ್ಗಿ ಕಾಫಿ ,ಅಡಿಕೆ, ತೆಂಗು, ಕರಿಮೆಣಸು,ಬಾಳೆ ಸೇರಿದಂತೆ ಕೃಷಿ ಉತ್ಪನ್ನ ಗಿಡಗಳನ್ನು ಧ್ವಂಸ ಪಡಿಸುತ್ತಿವೆ ಎಂದು ಗ್ರಾಮಸ್ಥರು ಅವಲತ್ತುಕೊಂಡಿದ್ದಾರೆ.ಈಚೆಗೆಹಲವು ತೋಟಗಳಿಗೆ ನುಗ್ಗಿರುವ ಕಾಡಾನೆಗಳು ಬಾಳೆ ಗಿಡಗಳನ್ನು ದ್ವಂಸಪಡಿಸಿ ರಸ್ತೆಗಳಲ್ಲಿ ಎಳೆದೊಯ್ದಿರುವ ದೃಶ್ಯಗಳು ಕಂಡುಬಂದಿವೆ. ಭತ್ತದ ಬಿತ್ತನೆಗಾಗಿ ಗದ್ದೆಗಳನ್ನು ಸಿದ್ಧಪಡಿಸಲಾಗಿದ್ದು ಬಿತ್ತನೆಗೂ ಮುನ್ನವೇ ಆನೆಗಳು ಗದ್ದೆಗಳಲ್ಲಿ ಅಡ್ಡಾಡಿವೆ.ಬಿತ್ತನೆ ಮುಗಿದ ನಂತರ ಮತ್ತೆ ಕಾಡಾನೆಗಳು ಪೈರುಗಳನ್ನು ಧ್ವಂಸ ಮಾಡುವ ಆತಂಕವಿದ್ದು ಭತ್ತದ ಕೃಷಿ ಮಾಡುವುದು ಸಹ ಅಸಾಧ್ಯವಾಗಿದೆ, ಈ ನಿಟ್ಟಿನಲ್ಲಿ ಸಂಬಂಧಪಟ್ಟವರು ಯಾರು ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಸಮಾಧಾನ ವ್ಯಕ್ತಪಡಿಸಿ ರಸ್ತೆ ತಡೆ ಪ್ರತಿಭಟನೆಗೆ ಮುಂದಾಗಿದ್ದಾರೆ. ಕಾಡಾನೆಗಳಿಂದ ಉಪಟಳದಿಂದ ಕಂಗೆಟ್ಟ ಕೋಕೇರಿ, ಮರಂದೋಡ,ನರಿಯಂದಡ ಹಾಗೂ ಚೇಲಾವರ ಗ್ರಾಮಸ್ಥರು ಸೋಮವಾರ ವಿರಾಜಪೇಟೆ – ನಾಪೋಕ್ಲು ಮುಖ್ಯರಸ್ತೆಯ ಚೆಯ್ಯಂಡಾಣೆಯ ಕೂಡ ರಸ್ತೆಯಲ್ಲಿ ಬೆಳಿಗ್ಗೆ 10 ಗಂಟೆಯಿಂದ 12 ಗಂಟೆವರೆಗೆ ರಸ್ತೆ ತಡೆ ಮಾಡಿ ತೀವ್ರತರದ ಪ್ರತಿಭಟನೆ ನಡೆಸಲಿದ್ದಾರೆ. ಕೋಕೇರಿ ಗ್ರಾಮದ ಪರವಾಗಿ ಮಚ್ಚಂಡ ರಂಜು, ಮರಂದೋಡ ಗ್ರಾಮದ ಪರವಾಗಿ ಚೋಯಮಾಡಂಡ ಹರೀಶ್ ಮೊಣ್ಣಪ್ಪ, ನರಿಯಂದಡ ಗ್ರಾಮದ ಪರವಾಗಿ ಪೊಕ್ಕುಳಂಡ್ರಾ ದಿವ್ಯ ಧನೋಜ್ ಹಾಗೂ ಚೇಲಾವರ ಗ್ರಾಮದ ಪರವಾಗಿ ಮುಂಡ್ಯೋಳಂಡ ಪ್ರವೀಣ್ ಪ್ರತಿಭಟನೆಯ ನೇತೃತ್ವ ವಹಿಸಲಿರುವುದಾಗಿ ಚೋಯಮಾಡಂಡ ಹರೀಶ್ ಮೊಣ್ಣಪ್ಪ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ . (ವರದಿ : ದುಗ್ಗಳ ಸದಾನಂದ)











