ನಾಪೋಕ್ಲು ಜು.9 : ಕಾಡಾನೆಗಳ ಹಿಂಡು ಸಮೀಪದ ಚೆಯ್ಯಂಡಾಣೆ ನರಿಯಂಡಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರ ನಿದ್ದೆಗೆಡಿಸಿದೆ. ಪಂಚಾಯಿತಿ ವ್ಯಾಪ್ತಿಯ ಕೋಕೇರಿ, ಚೆಯ್ಯಂಡಾಣೆ, ಚೇಲಾವರ, ನರಿಯಂದಡ ಗ್ರಾಮಗಳಲ್ಲಿ ಕಾಡಾನೆ ಹಾವಳಿ ಮಿತಿಮೀರಿದ್ದು, ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ. ಕೋಕೇರಿ ಗ್ರಾಮದ ಮಚ್ಚಂಡ ಸುಮತಿ ಎಂಬವರ ತೋಟಗಳಲ್ಲಿ ನಿರಂತರ ದಾಳಿ ನಡೆಸಿರುವ ಕಾಡಾನೆಗಳು ಕಾಫಿ ಗಿಡ ಸೇರಿದಂತೆ ಇನ್ನಿತರ ಕೃಷಿ ಗಿಡಗಳನ್ನು ತುಳಿದು ನಾಶ ಮಾಡಿದೆ. ತೋಟಕೆ ತೆರಳುವ ಗೇಟ್ ಅನ್ನು ತುಳಿದು ಹಾನಿ ಪಡಿಸಿ ಗ್ರಾಮದಲ್ಲಿ ತೋಟಗಳಿಗೆ ಲಗ್ಗೆ ಇಟ್ಟಿರುವ ಕಾಡಾನೆಗಳ ಹಿಂಡು ಗ್ರಾಮಸ್ಥ ಮುಕ್ಕಾಟಿ ಚಿನ್ನಪ್ಪ ಅವರ ಮನೆಯ ಆವರಣದಲ್ಲಿದ್ದ ದೊಡ್ಡ ಗಾತ್ರದ ಕಂಚಿನ ಕಡಾಯವನ್ನು ತುಳಿದು ಹಾನಿ ಪಡಿಸಿದೆ. ಈ ವ್ಯಾಪ್ತಿಯ ಚೋಯಮಂಡ, ಮೇರಿಯಂಡ, ಮುಕ್ಕಾಟಿ, ಕನ್ನಡಿಯಂಡ, ಮಾರ್ಚಂಡ ಕುಟುಂಬಸ್ಥರ ತೋಟಗಳಿಗೆ ಕಾಡಾನೆಗಳ ಹಾವಳಿಯಿಂದ ಅಪಾರ ನಷ್ಟ ಉಂಟಾಗಿದೆ. ಕೃಷಿ ಪಸಲುಗಳು ಹಾನಿಯಾಗಿದೆ.ಚೆಯ್ಯಂಡಾಣೆ,ಚೇಲಾವರ ಭಾಗದ ತೋಟಗಳಿಗೆ ಕಾಡಾನೆಗಳ ಹಿಂಡು ಲಗ್ಗೆ ಇಟ್ಟು ದಾಂದಲೆ ಮಾಡುತ್ತಿರುವುದರಿಂದ ಕಾರ್ಮಿಕರು ಭಯಗೊಂಡು ತೋಟಕೆ ಕೆಲಸಕ್ಕೆ ತೆರಳಲು ಹಿಂಜರಿಯುತ್ತಿದ್ದಾರೆ . ತೋಟದಲ್ಲಿರುವ ಫಸಲು ಭರಿತ ಗಿಡಗಳನ್ನು ತುಳಿದು ಬಹುತೇಕ ಹಾಳು ಗೆಡವಿದೆ ಎಂದು ಬೆಳೆಗಾರರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು. ಗ್ರಾಮದಲ್ಲಿ ಜನರು ಕಾಡಾನೆಗಳ ಉಪಟಳದಿಂದ ಓಡಾಡಲು ಭಯ ಪಡುವಂತ ಪರಿಸ್ಥಿತಿ ಎದುರಾಗಿದೆ. ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು. ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 25ಕ್ಕೂ ಅಧಿಕ ಕಾಡಾನೆಗಳು ದಾಂದಲೆ ನಡೆಸುತ್ತಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಸರ್ಕಾರ ಹಾಗೂ ಅರಣ್ಯ ಇಲಾಖೆ ಗ್ರಾಮದಲ್ಲಿ ದಾಖಲೆ ನಡೆಸುತ್ತಿರುವ ಕಾಡಾನೆಗಳನ್ನು ಕಾಡಿಗಟ್ಟುವ ಅಥವಾ ಸೆರೆ ಹಿಡಿಡು ಸ್ಥಳಾಂತರಿಸುವ ಕಾರ್ಯಾಚರಣೆಯನ್ನು ತಕ್ಷಣ ಕೈಗೊಂಡು ಶಾಶ್ವತ ಪರಿಹಾರ ಒದಗಿಸಬೇಕು.ನಷ್ಟಕ್ಕೊಳ್ಳಗಾದ ಬೆಳೆಗಾರರಿಗೆ ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. (ವರದಿ : ದುಗ್ಗಳ ಸದಾನಂದ)












