ಮಡಿಕೇರಿ ಜು.10 : ಯುವ ಬಂಟ್ಸ್ ಅಸೋಸಿಯೇಷನ್ ವತಿಯಿಂದ, ಮಡಿಕೇರಿ ನಗರ ಬಂಟರ ಮಹಿಳಾ ಘಟಕ ಮತ್ತು ಗಾಳಿಬೀಡು ಹೋಬಳಿ ಬಂಟರ ಸಂಘದ ಸಹಕಾರದೊಂದಿ ಜು.30 ರಂದು ಗಾಳಿಬೀಡಿನಲ್ಲಿ ಮುಂಗಾರಿನ ಸಂಸ್ಕೃತಿಯನ್ನು ಪ್ರತಿಬಂಬಿಸುವ ‘ಆಟಿಡೊಂಜಿ ದಿನ ಕೆ¸ರ್‍ದ ಗೊಬ್ಬು’ ವಿಶಿಷ್ಟ ಕಾರ್ಯಕ್ರಮ ನಡೆಯಲಿದೆ.
ನಗರದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ ಅಸೋಸಿಯೇಷನ್ ಅಧ್ಯಕ್ಷ ಬಿ.ಜೆ. ವಸಚಿತ್ ರೈ ಈ ಬಗ್ಗೆ ಮಾಹಿತಿ ನೀಡಿ, ಇಂದಿನ ಪೀಳಿಗೆಗೆ ನಮ್ಮ ಸಾಂಪ್ರದಾಯಿಕ ಬದುಕಿನ ಪರಿಚಯ ಮಾಡಿಕೊಡುವ ಸಲುವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲು ಮುಂದಾಗಿದ್ದೇವೆ. ಕಾರ್ಯಕ್ರಮ ಗಾಳಿಬೀಡಿನ ಹೊರಮಲೆ ಶಿವಪ್ರಸಾದ್‍ರವರ ಭತ್ತದ ಗದ್ದೆಯಲ್ಲಿ ನಡೆಯಲಿದೆಯೆಂದು ತಿಳಿಸಿದರು.
ಅಸೋಸಿಯೇಷನ್ ಉಪಾಧ್ಯಕ್ಷ ಶರತ್ ಶೆಟ್ಟಿ ಕಾರ್ಯಕ್ರಮದ ವಿವರ ನೀಡಿ, ಕೆಸರು ಗದ್ದೆಯಲ್ಲಿ ಪುರುಷರಿಗೆ ಹ್ಯಾಂಡ್ ಬಾಲ್(7+2), 100 ಮೀಟರ್ ಓಟ(ವಿವಿಧ ವಿಭಾಗದಲ್ಲಿ), ಹಗ್ಗಜಗ್ಗಾಟ, ದಂಪತಿ ಓಟಗಳನ್ನು ಆಯೋಜಿಸಲಾಗಿದೆ. ಮಹಿಳೆಯರಿಗೆ 100 ಮೀಟರ್ ಓಟ, ಹಗ್ಗಜಗ್ಗಾಟ, ನಿಂಬೆ ಚಮಚ, ಪಾಸಿಂಗ್ ಬಾಲ್, ಮಕ್ಕಳಿಗೆ 100 ಮೀ. ಓಟ ಹಾಗೂ ಕೆಸರುಗದ್ದೆಯಲ್ಲಿ ವಿವಿಧ ಮನೋರಂಜನಾ ಸ್ಪರ್ಧೆಗಳು ನಡೆಯಲಿದೆ
ಹಗ್ಗಜಗ್ಗಾಟ ಮತ್ತು ಹ್ಯಾಂಡ್ ಬಾಲ್ ಸ್ಪರ್ಧೆಗೆ ಜುಲೈ 25ರೊಳಗೆ ತಂಡಗಳ ಹೆಸರು ನೋಂದಾಯಿಸಿಕೊಳ್ಳಬೇಕು. ಹೆಸರು ನೋಂದಣಿಗೆ ನಿಖಿಲ್ ಆಳ್ವ-99724 77982, ಮಿಥುನ್ ರೈ-95359 46519, ರೇಣುಕಾ ಪ್ರಸಾದ್ ಶೆಟ್ಟಿ-78923 24182 ಇವರನ್ನು ಸಂಪರ್ಕಿಸಬಹುದೆಂದು ತಿಳಿಸಿದರು.
ವಿಶೇಷತೆಗಳು-ಎತ್ತಿನ ಮೂಲಕ ಉಳುಮೆ ಪ್ರಾತ್ಯಕ್ಷಿಕೆ, ಸಾಂಪ್ರದಾಯಿಕ ಕೃಷಿ ಪರಿಕರಗಳ ಪ್ರದರ್ಶನ, ನಗರ ಮಹಿಳಾ ಘಟಕದಿಂದ ಮಳೆಗಾಲದ ವಿಶೇಷ ಖಾದ್ಯಗಳ ಪ್ರದರ್ಶನ, ತುಳುನಾಡಿನ ಜಾನಪದ ನೃತ್ಯ ಆಟಿ ಕಳೆಂಜ ಪ್ರದರ್ಶನ, ಸಾಂಪ್ರದಾಯಿಕ ಅಲಂಕಾರದೊಂದಿಗಿನ ವಿಶೇಷ ವೇದಿಕೆ ಸೇರಿದಂತೆ ಹಲವು ವಿಶೇಷತೆಗಳೊಂದಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಉದ್ಘಾಟನೆ-ಉದ್ಘಾಟನಾ ಕಾರ್ಯಕ್ರಮ ಬೆಳಗ್ಗೆ 9.30ಕ್ಕೆ ನಡೆಯಲಿದೆ. ಗಾಳಿಬೀಡು ಘಟಕ ಅಧ್ಯಕ್ಷರಾದ ಸುಭಾಷ್ ಆಳ್ವ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಕೃಷಿಕರಾದ ಹೊರಮಲೆ ಶಿವಪ್ರಸಾದ್ ರೈ ದಿನದ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ಜರುಗಲಿದೆ. ಎಸ್‍ಎಸ್‍ಎಲ್‍ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಶೇ.85ಕ್ಕಿಂತ ಹೆಚ್ಚು ಅಂಕ ಪಡೆದ ಸಮುದಾಯದ ವಿದ್ಯಾರ್ಥಿಗಳಿಗೆ ಜಿಲ್ಲಾ ಬಂಟರ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರವನ್ನು ಈ ಕಾರ್ಯಕ್ರಮದಲ್ಲಿ ನೀಡಲಾಗುವುದು. ಯುವ ಬಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ವಸಂತ ರೈ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಜಿಲ್ಲಾ ಬಂಟರ ಸಂಘದ ಗೌರವಾಧ್ಯಕ್ಷ ಬಿ.ಬಿ. ಐತಪ್ಪ ರೈ ಉದ್ಘಾಟಿಸಲಿದ್ದಾರೆಂದು ಮಾಹಿತಿ ನೀಡಿದರು.
ಗೋಷ್ಠಿಯಲ್ಲಿ ಅಸೋಸಿಯೇಷನ್ ಸಂಚಾಲಕ ಶಿವಪ್ರಸಾದ್ ರೈ, ಸಂಘಟನಾ ಕಾರ್ಯದರ್ಶಿ ಪಿ.ಕೆ. ಸತೀಶ್ ರೈ, ನಿರ್ದೇಶಕರಾದ ರವಿಕಿರಣ್ ರೈ, ಸುರೇಶ್ ರೈ ಬಿ.ಕೆ. ಉಪಸ್ಥಿತರಿದ್ದರು.









