ಮಡಿಕೇರಿ ಜು.10 : ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವದ ಅಂಗವಾಗಿ, ಬೆಳ್ಳಿಮಹೋತ್ಸವ ಆಚರಣಾ ಸಮಿತಿ, ಬೆಳ್ಳಿ ಮಹೋತ್ಸವ ಕ್ರೀಡಾ ಸಮಿತಿ ಹಾಗೂ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ ಪತ್ರಕರ್ತರ ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಆದರ್ಶ್ ಅದ್ಕಲೇಗಾರ್, ನವೀನ್ ಡಿಸೋಜ ಚಾಂಪಿಯನ್ನಾಗಿ ಹೊರಹೊಮ್ಮಿದರು.
ಸಿಂಗಲ್ಸ್ ವಿಭಾಗದಲ್ಲಿ 16 ತಂಡಗಳು ಭಾಗವಹಿಸಿದ್ದರೆ, ಡಬಲ್ಸ್‍ನಲ್ಲಿ 10 ತಂಡಗಳು ಪಾಲ್ಗೊಂಡಿತ್ತು. ಲೀಗ್ ಮಾದರಿಯಲ್ಲಿ ನಡೆದ ಪಂದ್ಯದಲ್ಲಿ ಸೆಮಿಫೈನಲ್ಸ್ ಹಂತಕ್ಕೆ ಸಿಂಗಲ್ಸ್ ವಿಭಾಗದಲ್ಲಿ ಆದರ್ಶ್ ಅದ್ಕಲೇಗಾರ್, ನವೀನ್ ಡಿಸೋಜಾ, ಲೋಕೇಶ್ ಕಾಟಕೇರಿ, ವಿನು ಕುಶಾಲಪ್ಪ ಅರ್ಹತೆ ಪಡೆದುಕೊಂಡರು. ಡಬಲ್ಸ್ ವಿಭಾಗದಲ್ಲಿ ಆದರ್ಶ್ ಅದ್ಕಲೇಗಾರ್-ನವೀನ್ ಡಿಸೋಜ, ಲೋಕೇಶ್ ಕಾಟಕೇರಿ-ವಿನು ಕುಶಾಲಪ್ಪ, ವಿನೋದ್-ಸುಬ್ರಮಣಿ, ಪ್ರಜ್ವಲ್-ಇಸ್ಮಾಯಿಲ್ ಕಂಡಕೆರೆ ತಂಡ ಪ್ರವೇಶ ಪಡೆಯಿತು.
ಸಿಂಗಲ್ಸ್ ವಿಭಾಗದಲ್ಲಿ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ವಿನುಕುಶಾಲಪ್ಪರನ್ನು ಲೋಕೇಶ್ ಕಾಟಕೇರಿ ಮಣಿಸಿ ಫೈನಲ್ ಪ್ರವೇಶಿಸಿದರೆ, ನವೀನ್ ಡಿಸೋಜರನ್ನು ಆದರ್ಶ್ ಅದ್ಕಲೇಗಾರ್ ಮಣಿಸಿ ಫೈನಲ್ ಪ್ರವೇಶಿಸಿದರು. ಫೈನಲ್ ಪಂದ್ಯದಲ್ಲಿ ಲೋಕೇಶ್‍ರನ್ನು ಆದರ್ಶ್ ಅದ್ಕಲೇಗಾರ್ 30-21 ಅಂಕಗಳಿಂದ ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದರು. ತೃತೀಯ ಸ್ಥಾನಕ್ಕೆ ನಡೆದ ಪಂದ್ಯದಲ್ಲಿ ವಿನುಕುಶಾಲಪ್ಪರನ್ನು ನವೀನ್ ಡಿಸೋಜ 21-6 ಅಂಕಗಳಿಂದ ಮಣಿಸಿದರು.
ಡಬಲ್ಸ್ ವಿಭಾಗದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ವಿನೋದ್-ಸುಬ್ರಮಣಿ ತಂಡವನ್ನು ಆದರ್ಶ್ ಅದ್ಕಲೇಗಾರ್-ನವೀನ್ ಡಿಸೋಜಾ ತಂಡ 30-11 ಅಂಕಗಳಿಂದ ಮಣಿಸಿ ಫೈನಲ್ ಪ್ರವೇಶಿಸಿದರೆ, ದ್ವಿತೀಯ ಸೆಮಿಫೈನಲ್‍ನಲ್ಲಿ ಪ್ರಜ್ವಲ್-ಇಸ್ಮಾಯಿಲ್ ಕಂಡಕೆರೆ ತಂಡವನ್ನು ಲೋಕೇಶ್ ಕಾಟಕೇರಿ-ವಿನು ಕುಶಾಲಪ್ಪ 30-21 ಅಂಕಗಳಿಂದ ಮಣಿಸಿದರು. ತೃತೀಯ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಪ್ರಜ್ವಲ್-ಇಸ್ಮಾಯಿಲ್ ಕಂಡಕೆರೆ ತಂಡವನ್ನು ವಿನೋದ್-ಸುಬ್ರಮಣಿ ತಂಡ 16-30 ಅಂಕಗಳಿಂದ ಮಣಿಸಿತು.
ಫೈನಲ್ ಪಂದ್ಯದಲ್ಲಿ ಆದರ್ಶ್ ಅದ್ಕಲೇಗಾರ್-ನವೀನ್ ಡಿಸೋಜಾ ತಂಡ ಲೋಕೇಶ್ ಕಾಟಕೇರಿ-ವಿನು ಕುಶಾಲಪ್ಪ ತಂಡವನ್ನು 2-1 ಸೆಟ್‍ಗಳಿಂದ ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು. ತಾತಪಂಡ ಜ್ಯೋತಿ ಸೋಮಯ್ಯ ಮಹಿಳಾ ಆಟಗಾರ್ತಿಗೆ ನೀಡಿದ ಬಹುಮಾನವನ್ನು ಬಿ.ಆರ್.ಸವಿತಾ ರೈ ಪಡೆದುಕೊಂಡರು.
ಸಭಾ ಕಾರ್ಯಕ್ರಮ : ನಿರಂತರ ಆಟೋಟಗಳಲ್ಲಿ ಪಾಲ್ಗೊಳ್ಳುವುದರಿಂದ ದೇಹದ ಪ್ರತೀ ಅಂಗಾಂಗಕ್ಕೂ ಸ್ವಾಸ್ಥ್ಯ ಲಭಿಸಿ ಆರೋಗ್ಯಯುತ ಬುದುಕು ಪಡೆಯಲು ಸಾಧ್ಯವಾಗುತ್ತದೆ ಎಂದು ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಪಟು ತಾತಪಂಡ ಜ್ಯೋತಿ ಸೋಮಯ್ಯ ಅಭಿಪ್ರಾಯಿಸಿದರು.
ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಆಟದ ವೇಳೆ ಆಗುವ ಗಾಯಗಳನ್ನು ಕಡೆಗಣಿಸಿ, ಎಚ್ಚೆತ್ತುಕೊಂಡರೆ ಮತ್ತೆ ಸಾಧನೆಯೆಡೆಗೆ ಸಾಗಬಹುದು ಎಂಬ ತಮ್ಮ ಅನುಭವವನ್ನು ಹಂಚಿಕೊಂಡ ಅವರು, ಯಾವುದೇ ಆಟೋಟಗಳಲ್ಲಿ ಪಾಲ್ಗೊಳ್ಳುವ ಮುನ್ನ ಪೂರ್ವ ತಯಾರಿಯ ತಾಲೀಮು ಅತ್ಯಗತ್ಯ. ಸುದ್ದಿಯ ಜಂಜಾಟದಲ್ಲಿರುವ ಪತ್ರಕರ್ತರು ಕ್ರೀಡೆಗೂ ಆಸಕ್ತಿ ತೋರುತ್ತಿರುವುದು ಉತ್ತಮ ಬೆಳವಣಿಗೆ. ವಯಸ್ಸಿನ ಮಿತಿಯಿಲ್ಲದೆ ಎಲ್ಲರೂ ವ್ಯಾಯಾಮವನ್ನು ರೂಢಿಸಿಕೊಳ್ಳ ಬೇಕೆಂದು ಜ್ಯೋತಿ ಸೋಮಯ್ಯ ಕಿವಿಮಾತು ಹೇಳಿದರು.
ಬೆಳ್ಳಿಮಹೋತ್ಸವ ಆಚರಣಾ ಸಮಿತಿ ಮಹಾಪೋಷಕರೂ, ಶಕ್ತಿ ಪ್ರಧಾನ ಸಂಪಾದಕರಾದ ಜಿ.ರಾಜೇಂದ್ರ ಪ್ರಾಸ್ತಾವಿಕವಾಗಿ ಮಾತನಾಡಿ, ಇಂತಹ ಸ್ಪರ್ಧೆಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯಬೇಕೆಂದರಲ್ಲದೆ, ಪ್ರತೀ ದಿನ ಪತ್ರಕರ್ತರು ಅಭ್ಯಾಸದಲ್ಲಿ ತೊಡಗಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು. ಒಳಾಂಗಣ ಶಟಲ್ ಬ್ಯಾಡ್ಮಿಂಟನ್ ಆಟ ಶಾರೀರಿಕವಾಗಿ ಪುಷ್ಠಿ ನೀಡುವ ಉತ್ತಮ ವ್ಯಾಯಾಮ. ಇಂತಹ ಕ್ರೀಡೆಗಳಿಂದ ಮಾನಸಿಕ ಸದೃಢತೆಯೊಂದಿಗೆ, ಎಲ್ಲರೂ ಸಮಾಗಮವಾಗುವ ಅವಕಾಶ ಸಿಗುತ್ತದೆ. ಜಂಜಾಟದ ಕೆಲಸದಲ್ಲಿ ಮಗ್ನರಾಗಿರುವ ಎಲ್ಲರೂ, ಆಗಿಂದಾಗ್ಗೆ ಎದ್ದು ನಡೆಯುವುದು, ಚಟುವಟಿಕೆಗಳಲ್ಲಿ ತೊಡಗಿಸಿ ಕೊಳ್ಳುವುದು ಒಳಿತು ಎಂದರು.
ಸಮಾಜ ಸೇವಕ ಟಿ.ಆರ್.ವಾಸುದೇವ್ ಮಾತನಾಡಿ, ಪತ್ರಕರ್ತರು ಸಮಾಜದ ತಪ್ಪುಗಳನ್ನು ತಿದ್ದಿ ನ್ಯಾಯ ಒದಗಿಸುವ ನ್ಯಾಯಾಧೀಶರಿದ್ದಂತೆ. ಕೊಡಗಿನ ಪತ್ರಕರ್ತರು ಇತರರಿಗಿಂತ ಭಿನ್ನವಾಗಿದ್ದು, ಆಮಿಷಗಳಿಂದ ದೂರ ಉಳಿದಿದ್ದಾರೆ. ಕೊಡಗಿನ ಪತ್ರಕರ್ತರು ವಿನಯ ಶಾಲಿಗಳು ಎಂದು ಹೇಳಿದರು.
ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷೆ ಬಿ.ಆರ್.ಸವಿತಾ ರೈ ಮಾತನಾಡಿ, ಪತ್ರಕರ್ತರ ಕೆಲಸದಲ್ಲಿನ ಜಂಜಾಟ ಮತ್ತು ಒತ್ತಡವನ್ನು ಇಂತಹ ಕ್ರೀಡಾಕೂಟಗಳು ಮರೆಸುತ್ತವೆ. ಕ್ರೀಡಾ ಪಂದ್ಯಗಳಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯ ಸುಧಾರಣೆ ಸಾಧ್ಯ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕೊಡಗು ಪ್ರೆಸ್ ಕ್ಲಬ್ ಉಪಾಧ್ಯಕ್ಷ ಆರ್.ಸುಬ್ರಮಣಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಅಂತರರಾಷ್ಟ್ರೀಯ ಶಟಲ್ ಬ್ಯಾಡ್ಮಿಂಟನ್ ಆಟಗಾರ್ತಿ ತಾತಪಂಡ ಜ್ಯೋತಿ ಸೋಮಯ್ಯ ಅವರನ್ನು ಕೊಡಗು ಪ್ರೆಸ್ ಕ್ಲಬ್ ಸನ್ಮಾನಿಸಿ ಗೌರವಿಸಿತು.
ಗಣ್ಯರು ವಿಜೇತರಿಗೆ ಬಹುಮಾನ ವಿತರಿಸಿದರು. ವೇದಿಕೆಯಲ್ಲಿ ಬೆಳ್ಳಿಮಹೋತ್ಸವ ಕ್ರೀಡಾ ಸಮಿತಿ ಸಂಚಾಲಕ ಸಂತೋಷ್ ರೈ, ಬೊಳ್ಳಜಿರ ಬಿ.ಅಯ್ಯಪ್ಪ ಇತರರು ಉಪಸ್ಥಿತರಿದ್ದರು.