ಮಡಿಕೇರಿ ಜು.10 : ಜಿಲ್ಲೆಯಲ್ಲಿ ಸುಮಾರು 2075 ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳವನ್ನು ಬಿತ್ತನೆ ಮಾಡಿರುತ್ತಾರೆ. ಆದರೆ ಇದೀಗ ಮುಸುಕಿನ ಜೋಳಕ್ಕೆ ಹೆಬ್ಬಾಲೆ, ಕೂಡಿಗೆ ಮತ್ತು ಮರೂರು ಗ್ರಾಮಗಳ ಸುತ್ತಮುತ್ತ ಬಿತ್ತನೆ ಮಾಡಿದ ಮುಸುಕಿನ ಜೋಳದಲ್ಲಿ ಸೈನಿಕ ಹುಳು ಈ ವರ್ಷ ಈಗಾಗಲೇ ಕಾಣಿಸಿಕೊಂಡಿದ್ದು, ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರಾದ ಶಭಾನಾ ಎಂ ಶೇಖ್, ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರದ ಸಸ್ಯ ಸಂರಕ್ಷಣಾ ತಜ್ಞ ಡಾ.ವೀರೇಂದ್ರ ಕುಮಾರ್‍ಕೆ.ವಿ ಮತ್ತು ಕೃಷಿ ಇಲಾಖೆಯ ಕೃಷಿ ಅಧಿಕಾರಿ ನವ್ಯ ನಾಣಯ್ಯ ಇವರನ್ನು ಒಳಗೊಂಡ ತಂಡ ಕುಶಾಲನಗರ ತಾಲ್ಲೂಕಿನ ಮರೂರು ಗ್ರಾಮದ ಮಹೇಶ್ ಮತ್ತು ಕಪನಪ್ಪನವರ ಮುಸುಕಿನ ಜೋಳದ ಗದ್ದೆಗಳಿಗೆ ಭೇಟಿ ಕೊಟ್ಟು, ಸೈನಿಕ ಹುಳುವಿನ ಭಾದೆಯನ್ನು ಪರೀಶೀಲಿಸಿದರು.
ನಂತರ ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಶಭಾನಾ ಎಂ ಶೇಖ್ ಅವರು ರೈತರಿಗೆ ಈ ಕೀಟದ ಹತೋಟಿಯ ಬಗ್ಗೆ ಮುಂಜಾಗರೂಕತೆಯನ್ನು ತೆಗೆದುಕೊಳ್ಳಬೇಕೆಂದು ತಿಳಿಸಿದರು. ಗೋಣಿಕೊಪ್ಪಲು ಐ.ಸಿ.ಎ.ಆರ್-ಕೃಷಿ ವಿಜ್ಞಾನ ಕೇಂದ್ರ ಮತ್ತು ಕೃಷಿ ಇಲಾಖೆ, ಕೊಡಗು ಜಿಲ್ಲೆ ಇವರುಗಳು ರೈತರಿಗೆ ಈ ಕೀಟದ ಹತೋಟಿಯ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳನ್ನು ತಿಳಿಸಿದ್ದಾರೆ.
ಸೈನಿಕ ಹುಳು ಕೀಟವು ಹಗಲು ವೇಳೆಯಲ್ಲಿ ಮಣ್ಣು, ಕಾಂಡದ ಮಧ್ಯ ಮತ್ತು ಗರಿಗಳ ತಳಭಾಗದಲ್ಲಿ ವಾಸಿಸುತ್ತಿದ್ದು, ಸಂಜೆ ಅಥವಾ ರಾತ್ರಿ ವೇಳೆಯಲ್ಲಿ ಇದರ ಚಟುವಟಿಕೆ ಕ್ರೀಯಾಶೀಲವಾಗುತ್ತದೆ. ಈ ಕೀಟವು ಮುಸುಕಿನ ಜೋಳದ ಎಲೆ ಮತ್ತು ತೆನೆಯನ್ನು ಕತ್ತರಿಸುವ ಕಾರ್ಯ ಸಂಜೆ ಅಥವಾ ರಾತ್ರಿ ವೇಳೆಯಲ್ಲಿ ಕಂಡುಬರುತ್ತದೆ. ಹಗಲಿನ ಹೊತ್ತಿನಲ್ಲಿ ಈ ಕೀಟದ ಕಾರ್ಯಚಟುವಟಿಕೆ ಕಣ್ಣಿಗೆ ಕಾಣದಂತಾಗಿ ರೈತರಲ್ಲಿ ಆತಂಕ ಪಡುವ ಪರಿಸ್ಥಿಯನ್ನು ಈ ಕೀಟವು ತರುತ್ತದೆ. ತೀವ್ರವಾಗಿ ಹಾನಿಗೊಳಗಾದ ಬೆಳೆಯಲ್ಲಿ ಎಲೆಯ ದಿಂಡು ಮಾತ್ರ ಕಾಣಸಿಗುತ್ತದೆ ಎಂದು ಸೈನಿಕ ಹುಳುವಿನ ಕುರಿತು ಮಾಹಿತಿ ನೀಡಿದರು.
ಹತೋಟಿ ಕ್ರಮಗಳು: ದೀಪಗಳಿಗೆ ಪತಂಗವು ಆಕರ್ಷಣೆಯಾಗುವುದರಿಂದ ರಾತ್ರಿ ವೇಳೆ ದೀಪದ ಬಲೆಯನ್ನು ಅಳವಡಿಸಬೇಕು. ಜಮೀನಿನ ಸುತ್ತಾ ಒಂದು ಅಡಿ ಆಳ ಗುಂಡಿ ತೆಗೆದು ಅದಕ್ಕೆ ಎಲೆಗಳಿಂದ ಮುಚ್ಚುವುದರಿಂದ ಹಗಲಿನಲ್ಲಿ ಮರಿಗಳು ಬಂದು ಶೇಖರಣಯಾಗುತ್ತವೆ. ಗುಂಡಿಗಳಿಗೆ ರಾಸಾಯನಿಕ ಸಿಂಪರಣೆ ಮಾಡಿ ಮರಿಗಳನ್ನು ಬಹುಭಾಗ ನಾಶಪಡಿಸಬಹುದು. ಗುಂಡಿಗೆ ಬೂದಿಯನ್ನು ಹಾಕುವುದರಿಂದ ಹುಳುಗಳ ಚಲನೆಯನ್ನು ನಿಯಂತ್ರಿಸಬಹುದು. ಈ ಕೀಟದ ಭಾದೆ ಮುಸುಕಿನ ಜೋಳದಲ್ಲಿ ಕಂಡು ಬಂದರೆ ಸಂಜೆ ವೇಳೆಯಲ್ಲಿ ಅಂದರೆ ಸಾಯಂಕಾಲ 5.30ರ ನಂತರ ಎಮಾಮೆಕ್ಟಿನ್ ಬೆಂಜೋಯೆಟ್ 0.3 ಗ್ರಾಂ ಪ್ರತಿ ಲೀ. ನೀರಿಗೆ ಮಿಶ್ರಣ ಮಾಡಿ ಸಿಂಪರಣೆ ಮಾಡಬೇಕು. ಈ ಕೀಟದ ಭಾದೆಯು ಸಂಜೆ ಹೊತ್ತು ಕ್ರೀಯಶೀಲವಾಗಿರುವುದರಿಂದ ಸಿಂಪರಣೆಯನ್ನು ಕಡ್ಡಾಯವಾಗಿ ಸಂಜೆ ಹೊತ್ತಿನಲ್ಲಿಯೇ ಮಾಡಬೇಕು.
ಹೆಚ್ಚಿನ ಮಾಹಿತಿಗೆ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಹಾಗೂ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳನ್ನು ಸಂರ್ಪಕಿಸಬಹುದು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಶಭಾನಾ ಎಂ ಶೇಖ್ ತಿಳಿಸಿದ್ದಾರೆ.