ನಾಪೋಕ್ಲು ಜು.10 : ಕಾಡಾನೆಗಳ ನಿರಂತರ ಉಪಟಳದಿಂದ ಬೇಸತ್ತ ಸಮೀಪದ ಚೆಯ್ಯಂಡಾಣೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಸ್ಥರು ಸೋಮವಾರ ವಿರಾಜಪೇಟೆ – ನಾಪೋಕ್ಲು ಮುಖ್ಯ ರಸ್ತೆಯ ಚೆಯ್ಯಂಡಾಣೆಯಲ್ಲಿ ರಸ್ತೆ ತಡೆ ಪ್ರತಿಭಟನೆ ನಡೆಸಿದರು. ಕಾಡಾನೆಗಳ ಉಪಟಳದಿಂದ ಬೇಸತ್ತ ಗ್ರಾಮಸ್ಥರು ಚೆಯ್ಯಂಡಾಣೆ-ನಾಪೋಕ್ಲು ಮುಖ್ಯರಸ್ತೆಯಲ್ಲಿ ಅರಣ್ಯ ಇಲಾಖೆಯ ವಿರುದ್ಧ ಪ್ರತಿಭಟನೆ ನಡೆಸಿದರು. ಬೆಳಿಗ್ಗೆ 10 ಗಂಟೆಯಿಂದ 12 ಗಂಟೆ ವರೆಗೆ ಎರಡು ಗಂಟೆಗಳ ಕಾಲ ಸಂಪರ್ಕ ರಸ್ತೆಯನ್ನು ಸಂಪೂರ್ಣ ಬಂದ್ ಮಾಡಿ ಅರಣ್ಯ ಇಲಾಖೆಯ ವಿರುದ್ಧ ಧಿಕ್ಕಾರ ಕೂಗಿದರು. ಪ್ರತಿಭಟನಾ ಸ್ಥಳಕ್ಕೆ ಅಧಿಕಾರಿಗಳು ಆಗಮಿಸುವಂತೆ ಪಟ್ಟು ಹಿಡಿದರು. ಕಾಡಾನೆಗಳ ನಿರಂತರ ಧಾಳಿಯಿಂದ ಕಾಫಿ, ಬಾಳೆ, ಅಡಿಕೆ ತೋಟಗಳು ನಾಶವಾಗುತ್ತಿವೆ. ಭತ್ತದ ಗದ್ದೆಗಳಲ್ಲಿ ಕೃಷಿ ಮಾಡಲು ಸಾಧ್ಯವಾಗುತ್ತಿಲ್ಲ.ಕಾರ್ಮಿಕರು ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ವನ್ಯಜೀವಿ ದಾಳಿಯಿಂದ ಗ್ರಾಮಸ್ಥರು ನಲುಗುತ್ತಿದ್ದರೂ ಅರಣ್ಯ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು. ಅಧಿಕಾರಿಗಳು ಕೃಷಿಕರ ಸಮಸ್ಯೆಗೆ ಸ್ಪಂದಿಸಬೇಕು ಮತ್ತು 10 ಆನೆಗಳ ಸ್ಥಳಾಂತರಕ್ಕೆ ಮೇಲಧಿಕಾರಿಗಳ ಅನುಮತಿ ಪಡೆದು ತಕ್ಷಣ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ನಾಪೋಕ್ಲು ಠಾಣಾಧಿಕಾರಿ ಮಂಜುನಾಥ್ ಹಾಗೂ ಮಡಿಕೇರಿ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರು. ನಂತರ ಸ್ಥಳಕ್ಕೆ ಆಗಮಿಸಿದ ವಿರಾಜಪೇಟೆ ಅರಣ್ಯಾಧಿಕಾರಿ ಎಸಿಎಫ್ ನೆಹರು, ಡಿಎಫ್ಒ ಎ.ಟಿ.ಪೂವಯ್ಯ, ಮಡಿಕೇರಿ ಅರಣ್ಯಾಧಿಕಾರಿ ದೇವಯ್ಯ ಮಾತನಾಡಿ ಆನೆಗಳನ್ನು ಸ್ಥಳಾಂತರಿಸುತ್ತೇವೆ ಎಂದು ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಹಿಂಪಡೆದ ಗ್ರಾಮಸ್ಥರು, ಆಗಸ್ಟ್ 15 ರಂದು ತೀವ್ರ ರೀತಿಯ ಪ್ರತಿಭಟನೆ ಹಾಗೂ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು. ಪ್ರತಿಭಟನೆ ಸಂದರ್ಭ ಎಲ್ಲಾ ವಾಹನಗಳ ಸಂಚಾರಕ್ಕೆ ಸಂಪೂರ್ಣ ತಡೆಯೊಡ್ಡಲಾಗಿತ್ತು. ಕೋಕೇರಿ ಗ್ರಾಮದ ಮಚ್ಚಂಡ ರಂಜು,ಮರಂದೋಡ ಗ್ರಾಮದ ಚೋಯಮಾಡಂಡ ಹರೀಶ್ ಮೊಣ್ಣಪ್ಪ, ನರಿಯಂದಡ ಗ್ರಾಮದ ಪೊಕ್ಕುಳಂಡ್ರಾ ದಿವ್ಯ ಧನೋಜ್ ಹಾಗೂ ಚೇಲಾವರ ಗ್ರಾಮದ ಪರವಾಗಿ ಮುಂಡ್ಯೋಳಂಡ ಪ್ರವೀಣ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಪಂಚಾಯತಿ ಅಧ್ಯಕ್ಷರಾದ ರಾಜೇಶ್ ಅಚ್ಚಯ್ಯ ಕಕ್ಕಬ್ಬೆ ಗ್ರಾಮ ಪಂಚಾಯಿತಿ ಸದಸ್ಯರಾದ ಹರೀಶ್ ಮೊನ್ನಪ್ಪ ಹಾಗೂ ಚೆಯ್ಯಂಡಾಣೆ ಪಂಚಾಯಿತಿ ಸದಸ್ಯರಾದ ಮುಂಡ್ಯೋಳಂಡ ಪ್ರವೀಣ್ ಸದಸ್ಯ ಪೆಮ್ಮಂಡ ಕೌಶಿ, ಮರಂದೋಡ ಸ್ಪೋರ್ಟ್ಸ್ ಮತ್ತು ರಿಕ್ರೀಯೇಷನ್ ಕ್ಲಬ್ ಅಧ್ಯಕ್ಷ ಮಾರ್ಚಂಡ ಪ್ರವೀಣ್ ಗ್ರಾಮಸ್ಥರು, ಮರಂದೋಡ ಕೊಡವ ಸಂಘದ ಅಧ್ಯಕ್ಷ ಅನ್ನಡಿಯ0ಡ ದಿಲೀಪ್ ಕುಮಾರ್ , ಗೌಡ ಸಮಾಜದ ಪದಾಧಿಕಾರವನ್ನು ಸದಸ್ಯರು, ಪಂಚಾಯಿತಿ ಸದಸ್ಯರು ಸೇರಿದಂತೆ ಚುನಾಯಿತ ಪ್ರತಿನಿಧಿಗಳು,ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. (ವರದಿ : ದುಗ್ಗಳ ಸದಾನಂದ)
Breaking News
- *ಕೊಡಗು : ಸಹಕಾರ ಸಂಘಗಳ ಸುಸ್ಥಿರತೆಗೆ ಎಲ್ಲರೂ ಶ್ರಮಿಸಿ : ಕೆ.ಎನ್.ರಾಜಣ್ಣ ಸಲಹೆ*
- *ಮಡಿಕೇರಿಯಲ್ಲಿ ಪೌರಕಾರ್ಮಿಕರ ದಿನಾಚರಣೆ : ಪೌರಕಾರ್ಮಿಕರಿಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ : ಡಾ.ಮಂತರ್ ಗೌಡ*
- *ವೀರ ಸೇನಾನಿಗಳಿಗೆ ಅಗೌರವ : ಕಿಡಿಗೇಡಿಯನ್ನು ಬಂಧಿಸಲು ನಾಪೋಕ್ಲು ಕೊಡವ ಸಮಾಜ ಒತ್ತಾಯ*
- *ಇಂದಿರಾ ನಗರ : ನೂತನ ಕಾಂಕ್ರೀಟ್ ರಸ್ತೆ ಉದ್ಘಾಟಿಸಿದ ಶಾಸಕ ಡಾ.ಮಂತರ್ ಗೌಡ*
- *ವೀರ ಸೇನಾನಿಗಳಿಗೆ ಅಪಮಾನ : ವ್ಯಾಲಿಡ್ಯೂ ಕೊಡವ ಕಲ್ಚರಲ್ ಅಸೋಸಿಯೇಷನ್ ಖಂಡನೆ*
- *ವೀರ ಸೇನಾನಿಗಳಿಗೆ ಅಗೌರವ : ಜಿಲ್ಲಾ ಬಿಜೆಪಿಯಿಂದ ಎಸ್ಪಿಗೆ ದೂರು*
- *ಮಡಿಕೇರಿಯಲ್ಲಿ ವಕೀಲರ ಸಂಘದಿಂದ ಪ್ರತಿಭಟನೆ*
- *ಜಿಲ್ಲಾ ಮಟ್ಟದ ಯುವಜನೋತ್ಸವ : ಹೆಸರು ನೋಂದಾಯಿಸಿಕೊಳ್ಳಲು ನ.28 ಕೊನೆ ದಿನ*
- *ನ.26 ರಂದು ಸಿಎನ್ಸಿಯಿಂದ ಕೊಡವ ನ್ಯಾಷನಲ್ ಡೇ ಮತ್ತು ಸಂವಿಧಾನ ದಿನಾಚರಣೆ*
- *ನ.24 ರಂದು ಕೊಡಗು ಜಿಲ್ಲಾ ಕಿವುಡರ ಸಂಘದ ಸಭೆ*