ಸೋಮವಾರಪೇಟೆ ಜು.11 : ತಾಲ್ಲೂಕು ಕಚೇರಿಯಲ್ಲಿ ಕೆಲ ಅಧಿಕಾರಿಗಳು ಸಿಬ್ಬಂದಿಗಳಿಂದ ರೈತರ ಶೋಷಣೆ ಆಗುತ್ತಿದೆ ಎಂದು ಆರೋಪಿಸಿರುವ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು ಹಾಗೂ ರೈತರು ತಕ್ಷಣವೇ ಅಧಿಕಾರಿಗಳನ್ನು ವರ್ಗಾವಣೆಗೊಳಿಸುವಂತೆ ಆಗ್ರಹಿಸಿದ್ದಾರೆ.
ಸಾಮಾಜಿಕ ಹೋರಾಟಗಾರ ಬಿ.ಪಿ.ಅನಿಲ್ ಕುಮಾರ್, ರೈತ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಲಿಂಗೇರಿ ರಾಜೇಶ್, ಕರವೇ ತಾಲ್ಲೂಕು ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ, ಕಾಫಿ ಬೆಳೆಗಾರರ ಹೋರಾಟ ಸಮಿತಿ ಅಧ್ಯಕ್ಷ ಎಂ.ಸಿ.ಮುದ್ದಪ್ಪ ಹಾಗೂ ರೈತ ಮುಖಂಡರ ನೇತೃತ್ವದಲ್ಲಿ ಸೋಮವಾರಪೇಟೆ ತಾಲ್ಲೂಕು ಆಡಳಿತ ಸೌಧ ಜಮಾಯಿಸಿದ ಪ್ರತಿಭಟನಕಾರರು ಕಂದಾಯ ಇಲಾಖೆಯ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ಅಸಮಾಧಾನ ವ್ಯಕ್ತಪಡಿಸಿದರು.
ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಬರುವಂತೆ ಪಟ್ಟು ಹಿಡಿದರು. ಅರ್ಧ ಗಂಟೆಗಳ ಕಾಲ ತಹಶೀಲ್ದಾರ್ ಸ್ಥಳಕ್ಕೆ ಬರದೆ ಇದ್ದಾಗ, ಆಕ್ರೋಶಗೊಂಡ ಪ್ರತಿಭಟನಾಕಾರರು ಕಚೇರಿಗೆ ಬೀಗ ಜಡಿಯುವುದಾಗಿ ಎಚ್ಚರಿಕೆ ನೀಡಿದರು.
ಇನ್ಸ್‍ಪೆಕ್ಟರ್ ರಾಮಚಂದ್ರನಾಯಕ್ ತಹಸೀಲ್ದಾರ್‍ರನ್ನು ಕರೆತಂದರು. ಪೊಲೀಸ್ ಬಂದೋಬಸ್ತ್‍ನಲ್ಲಿ ಪ್ರತಿಭಟನಾಕಾರರ ಅಹವಾಲು ಆಲಿಸಿದರು.
ಕಚೇರಿಯಲ್ಲಿ ನಡೆಯುತ್ತಿರುವ ಅವ್ಯವಹಾರಗಳು, ಬ್ರೋಕರ್‍ಗಳ ಹಾವಳಿ, ಬಡ ರೈತರ ಪೋಡಿ ದುರಸ್ತಿ ಫೈಲ್‍ಗಳು ವಿಲೇವಾರಿ ಆಗದಿರುವ ಬಗ್ಗೆ ಸಮಾಜಾಯಿಷಿಕೆ ನೀಡಿದರು.
ಮಧ್ಯಾಹ್ನದ ನಂತರ ಉಪವಿಭಾಗಾಧಿಕಾರಿ ಡಾ.ಯತೀಶ್ ಉಲ್ಲಾಳ್ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದರು.
ಈ ಸಂದರ್ಭ ಬ್ರೋಕರ್‍ಗಳ ಮೂಲಕ ದುರಸ್ತಿಗೆ ಬಂದ ಅರ್ಜಿಗಳು ವಿಲೇವಾರಿಯಾಗುತ್ತವೆ. ಬೆಂಗಳೂರು, ಮೈಸೂರು ಸೇರಿದಂತೆ ನಗರ ಪ್ರದೇಶದ ಮಾಲೀಕರ ಜಾಗದ ದುರಸ್ತಿ ಫೈಲ್‍ಗಳು ಒಂದೆರಡು ತಿಂಗಳಿಗೆ ದುರಸ್ತಿಯಾಗಿ ಮಾಲೀಕತ್ವದ ಹಕ್ಕು ಸಿಗುತ್ತಿವೆ. ಆದರೆ ಎರಡು ದಶಕಗಳ ಬಡವರ ಅರ್ಜಿಗಳು ತಾಲ್ಲೂಕು ಕಚೇರಿಯಲ್ಲೇ ಕೊಳೆಯುತ್ತಿವೆ. ಅನೇಕರ ಅರ್ಜಿಗಳು ನಾಪತ್ತೆಯಾಗಿವೆ ಎಂದು ಅನಿಲ್ ಕುಮಾರ್ ಆರೋಪಿಸಿದರು.
ಒಂದು ಎಕರೆ ದುರಸ್ತಿಗೆ ಒಂದರಿಂದ ಒಂದೂವರೆ ಲಕ್ಷ ರೂ.ಗಳನ್ನು ಫಿಕ್ಸ್ ಮಾಡಿಕೊಂಡಿದ್ದಾರೆ. ಬ್ರೋಕರ್‍ಗಳ ಮೂಲಕ ಹೋದ ಫೈಲ್‍ಗಳಿಗೆ ಮುಕ್ತಿ ಸಿಗುತ್ತದೆ. ಬಡವರಿಂದಲೂ ಹಣ ಕೀಳುತ್ತಾರೆ. ಅನೇಕ ಸಿಬ್ಬಂದಿಗಳಿಗೆ ಕರುಣೆಯೇ ಇಲ್ಲ. ವರ್ಷವಿಡಿ ಕಚೇರಿಗೆ ಅಲೆದರೂ ಮಾನವೀಯ ದೃಷ್ಟಿಯಿಂದಲೂ ಕೆಲಸ ಮಾಡಿಕೊಡುತ್ತಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.
ಅನೇಕ ವರ್ಷಗಳಿಂದ ಇಲ್ಲಿ ಗೂಟ ಹೊಡೆದುಕೊಂಡು ಇದ್ದವರಿಂದ ಸಮಸ್ಯೆಯಾಗುತ್ತಿದೆ. ಅರ್ಜಿಗಳನ್ನು ವರ್ಷಗಟ್ಟಲೇ ಇಟ್ಟುಕೊಂಡಿರುವ ಗ್ರಾಮ ಲೆಕ್ಕಿಗರು, ಕಂದಾಯ ನಿರೀಕ್ಷಕರನ್ನು ಅಮಾನತು ಮಾಡಬೇಕು. ಕಂದಾಯ ಇಲಾಖೆ ಪ್ರತಿಯೊಬ್ಬರನ್ನು ವರ್ಗಾವಣೆ ಮಾಡಬೇಕು ಎಂದು ಪ್ರತಿಭಟನಾಕಾರರು ಉಪವಿಭಾಗಾಧಿಕಾರಿಯನ್ನು ಒತ್ತಾಯಿಸಿದರು.
ಪ್ರತಿಭಟನಾಕಾರರ ಆರೋಪಗಳನ್ನು ಎರಡು ಗಂಟೆಗಳ ಕಾಲ ಆಲಿಸಿದ ಉಪವಿಭಾಗಧಿಕಾರಿ, ರೈತರ ಎಲ್ಲಾ ಬೇಡಿಕೆಗಳನ್ನು ಈಡೇರಿಸದಿದ್ದರೆ ನನ್ನ ಹುದ್ದೆಗೆ ಗೌರವ ಸಿಗುವುದಿಲ್ಲ ಎಂದು ಹೇಳಿದರು.
ಕರ್ತವ್ಯ ಲೋಪವೆಸಗಿದ ನೌಕರರ ವಿರುದ್ಧ ಕಠಿಣ ಕ್ರಮಕೈಗೊಳ್ಳುತ್ತೇವೆ. ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಅಂತಹ ನೌಕರರನ್ನು ವರ್ಗಾವಣೆ ಮಾಡಲು ಕ್ರಮಕೈಗೊಳ್ಳಲಾಗುವುದು. ಕಚೇರಿಯಲ್ಲಿರುವ ದುರಸ್ತಿ ಕಡತಗಳನ್ನು ನಾಲ್ಕು ವಾರದೊಳಗೆ ವಿಲೇವಾರಿ ಮಾಡಿಕೊಡಲಾಗುವುದು. ಅರ್ಜಿ ಸಲ್ಲಿಕೆಯ ವಿವರಗಳನ್ನು ನಾಳೆಯೇ ನೋಟೀಸ್ ಬೋರ್ಡ್‍ನಲ್ಲಿ ಹಾಕಿಸುತ್ತೇನೆ. ಪೋಡಿ ಮುಕ್ತ ಹೋಬಳಿ ಮಾಡುವ ಬಗ್ಗೆ ರೈತ ಮುಖಂಡರೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು. ಪ್ರತಿ ಗುರುವಾರ ಇಲ್ಲಿನ ಕಚೇರಿಯಲ್ಲೇ ಇರುತ್ತೇನೆ. ಸಮಸ್ಯೆಗಳಿದ್ದರೆ ದೂರು ನೀಡಬಹುದು ಎಂದು ಹೇಳಿದರು. ಉಪವಿಭಾಗಧಿಕಾರಿಗಳ ಭರವಸೆಯ ಮೇರೆಗೆ ಇಂದಿನ ಪ್ರತಿಭಟನೆಯನ್ನು ಮುಕ್ತಾಯಗೊಳಿಸುತ್ತೇವೆ ಎಂದು ಪ್ರತಿಭಟನೆ ನೇತೃತ್ವ ವಹಿಸಿದ್ದ ಅನಿಲ್‍ಕುಮಾರ್ ಹೇಳಿದರು.
ತಹಸೀಲ್ದಾರ್ ಎಸ್.ವಿ.ನರಗುಂದ್, ಡಿಡಿಎಲ್‍ಆರ್ ಶ್ರೀನಿವಾಸ್ ಹಾಜರಿದ್ದರು.









