ನಾಪೋಕ್ಲು ಜು.11 : ನಾಪೋಕ್ಲು ಗ್ರಾ.ಪಂ ಗೆ ಒಳಪಟ್ಟ ಚೆರಿಯ ಪರಂಬು ಗ್ರಾಮದಲ್ಲಿ ರಸ್ತೆಯನ್ನು ಹಗೆದು ಅವೈಜ್ಞಾನಿಕವಾಗಿ ಚರಂಡಿ ನಿರ್ಮಾಣ ಮಾಡಿ ಮಾಡಿದ್ದಾರೆಂದು ಆರೋಪಿಸಿ ಗ್ರಾಮಸ್ಥರು ಪಂಚಾಯಿತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭ ಮಾತನಾಡಿದ ಗ್ರಾಮಸ್ಥ ಅಬ್ದುಲ್ ಕರೀಮ್ ಕಳೆದ ಹಲವಾರು ವರ್ಷಗಳಿಂದ ಚೆರಿಯಪರಂಬು ಗ್ರಾಮಕ್ಕೆ ಯಾವುದೇ ರೀತಿಯ ಮೂಲಭೂತ ಸೌಕರ್ಯವನ್ನು ಒದಗಿಸಲು ಪಂಚಾಯಿತಿ ವಿಫಲವಾಗಿದೆ. ಗ್ರಾಮಕ್ಕೆ ತೆರಳುವ ಮುಖ್ಯ ರಸ್ತೆಗೆ ಪರ್ಯಾಯ ಚರಂಡಿ ವ್ಯವಸ್ಥೆ ನಿರ್ಮಿಸದೆ ಇರುವ ಕಾರಣ ಪಟ್ಟಣದ ಮಾರುಕಟ್ಟೆ ಹಾಗೂ ಪದವಿ ಪೂರ್ವ ಕಾಲೇಜು ಕಡೆಯಿಂದ ಬರುವ ಕೆಸರು ಮಿಶ್ರಿತ ಮಳೆ ನೀರು ನಮ್ಮ ಗ್ರಾಮಕ್ಕೆ ತೆರಳುವ ರಸ್ತೆಯಲ್ಲೇ ಮದ್ಯದಲ್ಲೇ ಹರಿಯುತ್ತಿದೆ.ಇದರಿಂದ ಬರುವ ಮಣ್ಣು ರಸ್ತೆಯಲ್ಲೇ ಶೇಖರಣೆಗೊಂಡು ಶಾಲಾ ಮಕ್ಕಳು ಹಾಗೂ ಸಾರ್ವಜನಿಕರು ಸಂಚರಿಸಲು ಭವಣೆ ಪಡುವ ಪರಿಸ್ಥಿತಿನಿರ್ಮಾಣವಾಗಿದೆ.ಇದನ್ನು ದುರಸ್ಥಿ ಪಡಿಸಲು ಕೆಲವು ದಿನಗಳ ಹಿಂದೆ ಪಂಚಾಯಿತಿಯ ಗಮನಕ್ಕೆ ತಂದ ಹಿನ್ನಲೆ ಶನಿವಾರ ಚರಂಡಿ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಆದರೆ ರಸ್ತೆಯನ್ನೇ ಹಗೆದು ಅವೈಜ್ಞಾನಿಕವಾಗಿ ಚರಂಡಿ ನಿರ್ಮಿಸುತ್ತಿರುವ ಬಗ್ಗೆ ನಾವು ಪ್ರಶ್ನಿಸಿದಾಗ ವಾರ್ಡ್ ಸದಸ್ಯರು ಮತ್ತು ಉಪಾಧ್ಯಕ್ಷರು ಉಡಾಫೆ ಉತ್ತರವನ್ನು ನೀಡಿದ್ದಾರೆಂದು ಕರೀಮ್ ಆರೋಪಿಸಿದರು.
ಗ್ರಾಮಸ್ಥ ಪರವಂಡ ಸಿರಾಜ್ ಮಾತನಾಡಿ ನಮ್ಮ ಗ್ರಾಮಕ್ಕೆ ತೆರಳುವ ರಸ್ತೆಗೆ ಸೂಕ್ತ ಚೆರಂಡಿ ವ್ಯವಸ್ಥೆ ಕಲ್ಪಿಸುವಂತೆ ಪಂಚಾಯಿತಿಗೆ ಮನವಿ ಮಾಡಲಾಗಿತ್ತು. ಮನವಿಗೆ ಸ್ಪಂದಿಸಿದ ಪಂಚಾಯಿತಿ ವಾರ್ಡ್ ಸದಸ್ಯರ ನೇತೃತ್ವದಲ್ಲಿ ಚರಂಡಿ ವ್ಯವಸ್ಥೆ ಕಲ್ಪಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಆದರೆ ರಸ್ತೆ ಬದಿಯಲ್ಲಿ ಸುಕ್ತ ರೀತಿಯಲ್ಲಿ ಚರಂಡಿ ನಿರ್ಮಿಸದೆ ಸಾರ್ವಜನಿಕ ರಸ್ತೆಯನ್ನು ಹಗೆದು ಅವೈಜ್ಞಾನಿಕವಾಗಿ ಚರಂಡಿ ನಿರ್ಮಾಣಕ್ಕೆ ಮುಂದಾದಾಗ ನಾವು ವಿರೋಧ ಪಡಿಸಿದಾಗ ಸದಸ್ಯರು ಮತ್ತು ಉಪಾಧ್ಯಕ್ಷರು ನೀವು ಹೇಳಿದಾಗೆ ಕೆಲಸ ನಡೆಸಲು ಸಾಧ್ಯವಿಲ್ಲ ನಾವು ಮಾಡುವ ಕೆಲಸಕ್ಕೆ ಸ್ಪಂದಿಸಬೇಕು ಎಂದು ಉಡಾಫೆ ಅಹಂಕಾರದ ಮಾತುಗಳನ್ನಾಡಿ ದ್ದಾರೆಂದು ಸಿರಾಜ್ ದೂರಿದರು.
ಮುಂದಿನ ದಿನಗಳಲ್ಲಿ ಗ್ರಾಮದಲ್ಲಿ ಸಮರ್ಪಕವಾಗಿ ಚರಂಡಿ ವ್ಯವಸ್ಥೆ ಕಲ್ಪಿಸದಿದ್ದರೆ ಗ್ರಾಮಸ್ಥರೆಲ್ಲರೂ ಸೇರಿ ಪಂಚಾಯಿತಿ ಎದುರು ಉಗ್ರ ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭ ಗ್ರಾಮಸ್ಥರಾದ ಅಬ್ದುಲ್ ಕರೀಂ, ಸಿರಾಜ್, ಝುಬೈರ್, ಅನಿಫಾ, ಸಲಾಂ, ಮಿರ್ಶಾದ್, ಅಫೀಲ್, ಅಬೂಬಕ್ಕರ್, ಪೀರು ಸಾಹೇಬ್, ಅಜೀಜ್, ಅರಫಾತ್, ಮಹಮ್ಮದ್ ಮತ್ತಿತರರು ಹಾಜರಿದ್ದರು.
ವರದಿ :ಝಕರಿಯ ನಾಪೋಕ್ಲು