ಮಡಿಕೇರಿ ಜು.11 : ಆನ್ ಲೈನ್ ಮಾರುಕಟ್ಟೆ ಅವಲಂಬಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ವಿದ್ಯಾರ್ಥಿಗಳು ಸೇರಿದಂತೆ ಯುವ ಜನಾಂಗ ಇ-ಕಾಮರ್ಸ್ ಕುರಿತು ಹೆಚ್ಚಿನ ಜ್ಞಾನ ಪಡೆದುಕೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ವಿಫುಲ ಅವಕಾಶಗಳಿವೆ ಎಂದು ಉದ್ಯಮಿ ಬಾಲಾಜಿ ಕಶ್ಯಪ್ ಕರೆ ನೀಡಿದರು.
ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ವಿಭಾಗದ ವತಿಯಿಂದ ‘ಇ-ಕಾಮರ್ಸ್ ಎಂಡ್ ಇಟ್ಸ್ ಡೈವರ್ಸಿಫಿಕೇಶನ್’ ಕುರಿತು ನಡೆದ ಒಂದು ದಿನದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಯುವಕರು ತಾವೇ ಉತ್ಪನ್ನಗಳನ್ನು ತಯಾರಿಸಿ ಅದಕ್ಕೆ ತಮ್ಮದೇ ಆದ ಬ್ರಾಂಡ್ ಸೃಷ್ಟಿಸಿ ಮಾರಾಟ ಮಾಡಲು ಆನ್ ಲೈನ್ ಮಾರುಕಟ್ಟೆ ಉತ್ತಮ ವೇದಿಕೆ ಎಂದು ಅಭಿಪ್ರಾಯಪಟ್ಟರು.
ಓಪನ್ ನೆಟ್ವರ್ಕ್ ಫಾರ್ ಡಿಜಿಟಲ್ ಕಾಮರ್ಸ್, ನಮ್ಮ ಯಾತ್ರಿ ಮುಂತಾದ ಇ-ಕಾಮರ್ಸ್ ತಾಣಗಳು ವಿವಿಧ ಉತ್ಪನ್ನ ಹಾಗೂ ಸೇವೆಗಳಿಗೆ ನ್ಯಾಯಬದ್ದ ಸಂಭಾವನೆ ದೊರಕಿಸುವಲ್ಲಿ ಅನುಕೂಲ ಮಾಡಿಕೊಡುವುದರಿಂದ, ಇಂತಹಾ ಅವಕಾಶಗಳನ್ನು ಯುವ ಉದ್ಯಮಿಗಳು ಸಮರ್ಪಕವಾಗಿ ಬಳಸಿಕೊಂಡರೆ ಇಂದಿನ ಪೈಪೋಟಿ ಆಧಾರಿತ ಮಾರುಕಟ್ಟೆಯಲ್ಲೂ ಯಶಸ್ಸು ಕಾಣಲು ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಪ್ರೊ. ಮೇಜರ್ ಬಿ.ರಾಘವ, ಇಂದು ನಮ್ಮಲ್ಲಿರುವ ಮಾನವ ಸಂಪನ್ಮೂಲ ಸಾಕಷ್ಟು ಪ್ರತಿಭೆಯಿಂದ ಕೂಡಿದ್ದು, ಮಾಹಿತಿ ಸಂವಹನ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಂಡರೆ ಸ್ವಾವಲಂಬನೆ ಜೊತೆಗೆ ಉದ್ಯೋಗ ಸೃಷ್ಷಿಯೂ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ವೇದಿಕೆಯಲ್ಲಿ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಸಂಯೋಜಕ ಡಾ. ಪ್ರದೀಪ್ ಆರ್. ಭಂಡಾರಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಅಂತಿಮ ಸ್ನಾತಕೋತ್ತರ ವಾಣಿಜ್ಯ ವಿದ್ಯಾಥರ್ಿನಿ ಜೀವಿತ ಸ್ವಾಗತಿಸಿದರು. ದ್ವಿತೀಯ ಎಂ.ಕಾಂ.ವಿದ್ಯಾರ್ಥಿನಿ ಸಲೂಫ ವಂದಿಸಿದರು. ಸ್ನಾತಕೋತ್ತರ ವಿದ್ಯಾರ್ಥಿಗಳು ಸೇರಿದಂತೆ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.